
ಮಂಗಳೂರು, ಜೂನ್ 05: ರಾಜ್ಯದ ಕಾಂಗ್ರೆಸ್ ಸರಕಾರದ ವಿದ್ಯುತ್ ಶುಲ್ಕ ಹೆಚ್ಚಳವನ್ನು ವಿರೋಧಿಸಿ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಇಂದು ಸಾರ್ವಜನಿಕ ಪ್ರತಿಭಟನೆ ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಜರುಗಿತು.

ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ ಇಂದು ಕಾಂಗ್ರೆಸ್ಸಿನ ಕಾರ್ಯವೈಖರಿ ಜನತೆಗೆ ಗೊತ್ತಾಗಿದೆ. ಮೊದಲಿಗೆ ಸಾಲು ಸಾಲು ಉಚಿತ ಯೋಜನೆಗಳನ್ನು ನೀಡಿ, ಆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಮತ್ತೆ ಅದರ ಹೊರೆಯನ್ನು ಜನಸಾಮಾನ್ಯನ ತಲೆಗೆ ಹೇರಲು ಮುಂದಾಗಿದ್ದಾರೆ.
ಇಂದು 200 ಯೂನಿಟ್ ಫ್ರೀ ವಿದ್ಯುತ್ ನೀಡಲು ಆಗದಿರುವ ಕಾಂಗ್ರೆಸ್ ಇದೀಗ ವಿದ್ಯುತ್ ಶುಲ್ಕ ಹೆಚ್ಚಳ ಮಾಡಲು ಮುಂದಾಗಿದೆ. ಆದರೆ ಕಾಂಗ್ರೆಸ್ಸಿಗರು ಇದೀಗ ಮನೆಯನ್ನು ಒಡೆಯುವ ಕೆಲಸವನ್ನು ಮಾಡಲು ಮುಂದಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಇದೆ. ಸರಕಾರದ ಬೊಕ್ಕಸಕ್ಕೆ 60,000 ಕೋಟಿ ನಷ್ಟ ಆಗುತ್ತದೆ ಎಂದು ಗೊತ್ತಿದ್ದರೂ ಇದನ್ನು ಜಾರಿಗೊಳಿಸುವ ಅಗತ್ಯ ಏನಿತ್ತು.
ಕೇವಲ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉಚಿತಕೊಟ್ಟು ಇದೀಗ ಒಂದು ಯೂನಿಟ್ಟಿಗೆ 70 ಪೈಸೆ ಏರಿಕೆ ಮಾಡಿದ್ದೀರಿ. ಭ್ರಷ್ಟಾಚಾರದ 40 ಶೇಕಡ ಸರಕಾರ ಎಂದು ಹೇಳಿದ ನೀವು ಏನಾದರೂ ದಾಖಲೆ ಕೊಟ್ಟರಾ..?
ನಿಮ್ಮ ಕಂಟ್ರಾಕ್ಟರ್ ಜೈಲಿಗೆ ಹೋದರೂ ದಾಖಲೆ ಕೊಡಲಾಗದ ಷಂಡ ಸರಕಾರ ನಿಮ್ಮದು ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ನಾಯಕರಾದ ಮೋನಪ್ಪ ಭಂಡಾರಿ, ಸುಧೀರ್ ಕುಮಾರ್ ಶೆಟ್ಟಿ ಕಣ್ಣೂರು, ಮೂಡಾದ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು, ಸತೀಶ್ ಕುಂಪಲ, ರೂಪಾ ಬಂಗೇರ, ರಾಜ ಗೋಪಾಲ ರೈ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು
