ಮುಸ್ಲಿಮರಿಗೆ ಉಪ ಮುಖ್ಯಮಂತ್ರಿ ಮತ್ತು ಐದು ಸಚಿವ ಸ್ಥಾನ ನೀಡಿ ಕೊಡಗಿನಿಂದ ಪೊನ್ನಣ್ಣ ಹಾಗೂ ಮಂತರ್ ಗೌಡ ಅವರಿಗೂ ಅವಕಾಶ ಸಿಗಲಿ ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ :

ಮುಸ್ಲಿಮರಿಗೆ ಉಪ ಮುಖ್ಯಮಂತ್ರಿ ಮತ್ತು ಐದು ಸಚಿವ ಸ್ಥಾನ ನೀಡಿ ಕೊಡಗಿನಿಂದ ಪೊನ್ನಣ್ಣ ಹಾಗೂ ಮಂತರ್ ಗೌಡ ಅವರಿಗೂ ಅವಕಾಶ ಸಿಗಲಿ ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ :


ಮಡಿಕೇರಿ ಮೇ 17 : ರಾಜ್ಯದ ಜನ ಕೋಮು ಭಾವನೆಯನ್ನು ತಿರಸ್ಕರಿಸಿ ಅಭಿವೃದ್ಧಿ ಪರ ಮತ ಚಲಾಯಿಸಿದ ಪರಿಣಾಮ ಅಭೂತಪೂರ್ವ ಯಶಸ್ಸಿನ ಮೂಲಕ ಅಧಿಕಾರಕ್ಕೆ ಬರುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಮುಸಲ್ಮಾನರಿಗೆ ಉಪ ಮುಖ್ಯಮಂತ್ರಿ ಹಾಗೂ ಐದು ಸಚಿವ ಸ್ಥಾನವನ್ನು ನೀಡಬೇಕೆಂದು ಕೆಪಿಸಿಸಿ ಮುಖ್ಯ ವಕ್ತಾರ ಮತ್ತು ಕೊಡಗು ಜಿಲ್ಲಾ ಮಾಜಿ ವೀಕ್ಷಕ ಟಿ.ಎಂ.ಶಾಹಿದ್ ತೆಕ್ಕಿಲ್ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತಿ, ಧರ್ಮ, ಭೇದ ಮರೆತು ರಾಜ್ಯದ ಸರ್ವ ಧರ್ಮೀಯರು ಕಾಂಗ್ರೆಸ್ ಪಕ್ಷವನ್ನು ಬೆಂಬಲಸಿ ಅಧಿಕಾರಕ್ಕೆ ತಂದಿದ್ದಾರೆ. ಮುಸಲ್ಮಾನರು ಸಂಪೂರ್ಣವಾಗಿ ಕಾಂಗ್ರೆಸ್ ಗೆ ಮತ ಚಲಾಯಿಸುವ ಮೂಲಕ ಪಕ್ಷವನ್ನು ಬಲಗೊಳಿಸಿದ್ದಾರೆ ಎಂದರು.
ಸರ್ಕಾರ ರಚಿಸುವ ಸಂದರ್ಭ ಓರ್ವ ಮುಸಲ್ಮಾನ ಶಾಸಕರಿಗೆ ಉಪ ಮುಖ್ಯಮಂತ್ರಿ ಹುದ್ದೆ ಹಾಗೂ ಐವರು ಮುಸಲ್ಮಾನರಿಗೆ ಸಚಿವ ಸ್ಥಾನವನ್ನು ನೀಡಬೇಕೆಂದು ಪಕ್ಷದ ವರಿಷ್ಠರ ಬಳಿಯೂ ಕೋರುವುದಾಗಿ ಹೇಳಿದರು.
ವಿರಾಜಪೇಟೆ ಕ್ಷೇತ್ರದ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಡಾ.ಮಂತರ್ ಗೌಡ ಅವರು ಅಭಿವೃದ್ಧಿ ಪರ ಚಿಂತನೆಯ ಉತ್ಸಾಹಿ ಶಾಸಕರುಗಳಾಗಿದ್ದಾರೆ. ಇವರುಗಳು ಮುಂದಿನ ದಿನಗಳಲ್ಲಿ ಸಚಿವರಾಗಿ ಬಂದು ಕೊಡಗಿನ ಏಳಿಗೆಗಾಗಿ ಶ್ರಮಿಸಲಿದ್ದಾರೆ ಶಾಂತಿ ಸೌಹಾರ್ದತೆ ಅಭಿವೃದ್ಧಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಮುಖ್ಯಮಂತ್ರಿಗಳು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ನ ಎಲ್ಲಾ ಭರವಸೆಗಳನ್ನು ಈಡೇರಿಸಲಿದ್ದಾರೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಜನ ಕೋಮು ಭಾವನೆಯನ್ನು ಕೆರಳಿಸುವ ರಾಜಕಾರಣವನ್ನು ತಿರಸ್ಕರಿಸಿ ಶಾಂತಿ, ಸೌಹಾರ್ದತೆ ಮತ್ತು ಅಭಿವೃದ್ಧಿ ಪರವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕೂಡ ಇದೇ ಪರಿಸ್ಥಿತಿ ಮುಂದುವರೆಯಲಿದ್ದು, ಕೋಮು ಭಾವನೆಯ ರಾಜಕೀಯ ನಡೆಯುವುದಿಲ್ಲ. ಕೇಂದ್ರ ಸರ್ಕಾರ ಕಳಪೆ ಆಡಳಿತವನ್ನು ನೀಡುತ್ತಿದ್ದು, ಕೇವಲ ಜಾಹೀರಾತಿನ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ನೋಟ್ ಬ್ಯಾನ್ ಕ್ರಮದಿಂದ ಆರ್ಥಿಕ ಬೆಳವಣಿಗೆ ಕುಸಿದಿದೆ, ಜಿಎಸ್‌ಟಿಯ ಹೊರೆ ಜನಸಾಮಾನ್ಯರ ಜೀವನಕ್ಕೆ ಹೊರೆಯಾಗಿದೆ. ದೇಶದ ಜನ ಬಿಜೆಪಿ ನೇತೃತ್ವದ ಸರ್ಕಾರದಿಂದ ಬೇಸತ್ತಿದ್ದಾರೆ ಎಂದು ಆರೋಪಿಸಿದರು.
::: ಮುಸ್ಲಿಮರು, ಕ್ರೈಸ್ತರು ಜಾಗೃತರಾಗಿರಬೇಕು :::
ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದ ಮೂಲಕ ಅಧಿಕಾರಕ್ಕೆ ಬಂದಿದೆ ಎನ್ನುವ ಕಾರಣಕ್ಕೆ ಮುಸ್ಲಿಂ ಯುವ ಸಮೂಹ ಯಾವುದೇ ಕಾರಣಕ್ಕೂ ಉದ್ವೇಗ ಮತ್ತು ಪ್ರಚೋದನೆಗೆ ಒಳಗಾಗಬಾರದು. ಈ ನಾಡಿನ ಕಾನೂನನ್ನು ಗೌರವಿಸುವ ಮೂಲಕ ಶಾಂತಿಯನ್ನು ಕಾಪಾಡಬೇಕು,ಅಪಪ್ರಚಾರ ಮಾಡುವವರಿಗೆ ಆಹಾರವಾಗಬಾರದು ಎಂದು ಟಿ.ಎಂ.ಶಾಹಿದ್ ಮನವಿ ಮಾಡಿದರು.
ಮುಸ್ಲಿಂ ಧ್ವಜವನ್ನು ಹಾರಿಸಿದರೆ ಪಾಕಿಸ್ತಾನದ ಧ್ವಜವೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಜನರ ಹಾದಿ ತಪ್ಪಿಸಲು ಮತ್ತು ಅಶಾಂತಿಯನ್ನು ಮೂಡಿಸಲು ಈ ರೀತಿಯ ಅಪಪ್ರಚಾರಗಳು ಆರಂಭಗೊಂಡಿದೆ. ಆದ್ದರಿಂದ ರಾಜ್ಯದ ಮುಸಲ್ಮಾನರು ಹಾಗೂ ಕ್ರೈಸ್ತರು ಜಾಗೃತಗೊಳ್ಳಬೇಕು. ಪ್ರಚೋದನೆ ಮತ್ತು ಆಮಿಷಗಳಿಗೆ ಒಳಗಾಗಬಾರದು, ಯಾವುದೇ ಅನ್ಯಾಯ ಅಥವಾ ಗೊಂದಲಗಳಾದಲ್ಲಿ ಶಾಸಕರುಗಳ ಗಮನಕ್ಕೆ ತರುವ ಪ್ರಯತ್ನ ಮಾಡಿ. ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಬೇಡಿ ಎಂದು ಮನವಿ ಮಾಡಿದರು.
ಎಲ್ಲಾ ಸಮುದಾಯದಲ್ಲೂ ಕೆಲವರು ಕೋಮುವಾದಿಗಳಿದ್ದಾರೆ, ಯಾವುದೇ ಸಮುದಾಯ ಅಥವಾ ಸಂಘಟನೆ ಇರಲಿ. ಕಾನೂನು ಮೀರಿ ವರ್ತಿಸಿದರೆ ನೂತನ ಕಾಂಗ್ರೆಸ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಮುಂಬರುವ ಜಿ.ಪಂ, ತಾ.ಪಂ ಮತ್ತು ಲೋಕಸಭಾ ಚುನಾವಣೆ ಸಂದರ್ಭ ಕೋಮು ಭಾವನೆ ಕೆರಳಿಸಿ ಮತಗಳಿಸುವ ಸಾಧ್ಯತೆಗಳಿದೆ. ಆದ್ದರಿಂದ ಅಲ್ಪಸಂಖ್ಯಾತರು ಮಾತ್ರವಲ್ಲದೆ ಎಲ್ಲಾ ಧರ್ಮೀಯರು ಜಾಗೃತರಾಗಬೇಕೆಂದು ಶಾಹಿದ್ ತಿಳಿಸಿದರು, ನ್ಯಾಯ ನೀತಿ ಬಿಟ್ಟು ಹಣಕ್ಕಾಗಿ ಕೆಲಸ ಮಾಡುವ ಅಧಿಕಾರಿಗಳಿಗೂ ಹೆಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಮಡಿಕೇರಿ ನಗರ ಉಪಾಧ್ಯಕ್ಷ ಎಂ.ಎA.ಯಾಕುಬ್ ಹಾಗೂ ಜಿಲ್ಲಾ ಸಮಿತಿ ಸದಸ್ಯ ಎಂ.ಹೆಚ್.ಜಫ್ರುಲ್ಲ ಉಪಸ್ಥಿತರಿದ್ದರು.

ರಾಜ್ಯ