
ಕಾಸರಗೋಡು:ಹೊಳೆಗೆ ಸ್ನಾನಕ್ಕಿಳಿದು ಅಪಾಯದಲ್ಲಿದ್ದ 11 ವರ್ಷದ ಬಾಲಕನನ್ನು 8 ವರ್ಷದ ಬಾಲಕ ರಕ್ಷಿಸಿದ ಘಟನೆ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದಲ್ಲಿ
ನಡೆದಿದೆ. ಪಳ್ಳಂಗೋಡು ಸಮೀಪದ ಪಯಸ್ವಿನಿ ಹೊಳೆಯಲ್ಲಿ ಸ್ಥಳೀಯ ಬಾಲಕನೊಬ್ಬ ಸ್ನಾನಕ್ಕೆ ಇಳಿದಿದ್ದ. ಈ ವೇಳೆ ನದಿಯಲ್ಲಿ ನೀರು ಹೆಚ್ಚಿದ್ದರಿಂದ ಬಾಲಕ ಅಪಾಯಕ್ಕೆ ಸಿಲುಕಿದ್ದ. ಕೂಡಲೇ ಆತನ
ಜೊತೆಗಿದ್ದ ಪಳ್ಳಂಗೋಡಿನ ಮುಹಮ್ಮದ್ ಹಿಬಾತುಲ್ಲ (8) ಸಾಹಸಗೈದು ಅಪಾಯಕ್ಕೆ ಸಿಲುಕಿದ್ದ 11 ವರ್ಷದ ಬಾಲಕನನ್ನು ನೀರಿನಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾನೆ.
ಹಿಬಾತುಲ್ಲ ಸ್ಥಳೀಯ ಎಲ್ಪಿ ಶಾಲೆಯ ವಿದ್ಯಾರ್ಥಿ ಬಾಲಕನ ಸಾಹಸ ಮತ್ತು ಸಮಯಪ್ರಜ್ಞೆಯಿಂದಾಗಿ ಇನ್ನೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಇದಕ್ಕಾಗಿ ಬಾಲಕನಿಗೆ ಸಾರ್ವಜನಿಕರಿಂದ ತೀವ್ರ ಪ್ರಶಂಸೆ ವ್ಯಕ್ತವಾಗಿದೆ.

