FIH Hockey World Cup 2026: ಅರ್ಜೆಂಟೀನಾ ವಿರುದ್ಧ 3-5 ಅಂತರದ ಸೋಲು; ವಿಶ್ವಕಪ್‌ನಿಂದ ಭಾರತ ಹೊರಕ್ಕೆ, ಮ್ಯಾನೇಜ್‌ಮೆಂಟ್ ವಿರುದ್ಧ ಶ್ರೀಜೇಶ್ ತೀವ್ರ ಆಕ್ರೋಶ!

FIH Hockey World Cup 2026: ಅರ್ಜೆಂಟೀನಾ ವಿರುದ್ಧ 3-5 ಅಂತರದ ಸೋಲು; ವಿಶ್ವಕಪ್‌ನಿಂದ ಭಾರತ ಹೊರಕ್ಕೆ, ಮ್ಯಾನೇಜ್‌ಮೆಂಟ್ ವಿರುದ್ಧ ಶ್ರೀಜೇಶ್ ತೀವ್ರ ಆಕ್ರೋಶ!

ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ 2026ರಲ್ಲಿ ಭಾರತದ ಪಯಣ ಅಂತ್ಯಗೊಂಡಿದೆ. ಸೋಮವಾರ ನಡೆದ ಸೆಮಿಫೈನಲ್ ಪ್ರವೇಶದ ನಿರ್ಣಾಯಕ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 3-5 ಗೋಲುಗಳ ಅಂತರದಿಂದ ಸೋಲನುಭವಿಸಿದ ಹರ್ಮನ್‌ಪ್ರೀತ್ ಸಿಂಗ್ ಪಡೆ ಕೂಟದಿಂದ ನಿರ್ಗಮಿಸಿದೆ. ಈ ಸೋಲಿನೊಂದಿಗೆ ಹಾಕಿ ವಿಶ್ವಕಪ್‌ನಲ್ಲಿ ಪದಕ ಗೆಲ್ಲುವ ಭಾರತದ 51 ವರ್ಷಗಳ ಕಾಯುವಿಕೆ ಮತ್ತಷ್ಟು ಮುಂದುವರಿದಿದೆ.

​ಸೆಮಿಫೈನಲ್‌ಗೇರಲು ಕನಿಷ್ಠ 2 ಗೋಲುಗಳ ಅಂತರದ ಗೆಲುವು ಅಗತ್ಯವಿದ್ದ ಭಾರತಕ್ಕೆ ರಕ್ಷಣಾತ್ಮಕ ಆಟದ ವೈಫಲ್ಯ ಮುಳುವಾಯಿತು. ಅರ್ಜೆಂಟೀನಾ ಪರ ಜೊವಾಕ್ವಿನ್ ಟೊಸ್ಕಾನಿ , ಡೆಲ್ಲಾ ಟೊರೆ , ಡೊಮೆನೆ ಮತ್ತು ಲ್ಯೂಕಾಸ್ ಟೊಸ್ಕಾನಿ ಗೋಲು ಬಾರಿಸಿ ಆಧಿಪತ್ಯ ಸಾಧಿಸಿದರು. ಭಾರತದ ಪರ ಸುಖ್‌ಜೀತ್ ಸಿಂಗ್ ಹಾಗೂ ಹಾರ್ದಿಕ್ ಸಿಂಗ್ ಗೋಲು ಗಳಿಸಿದರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಭಾರತ ಈಗ 7ನೇ ಸ್ಥಾನಕ್ಕಾಗಿ ಬೆಲ್ಜಿಯಂ ವಿರುದ್ಧ ಕ್ಲಾಸಿಫಿಕೇಶನ್ ಪಂದ್ಯ ಆಡಲಿದೆ.

‘ಜವಾಬ್ದಾರಿ ಯಾರದ್ದು?’: ಶ್ರೀಜೇಶ್-ರಾಸ್ಕಿನ್ಹಾ ಪ್ರಶ್ನೆ​ ವಿಶ್ವಕಪ್‌ನಿಂದ ಭಾರತೀಯ ಪುರುಷರ ಹಾಗೂ ಮಹಿಳಾ (ಆಸ್ಟ್ರೇಲಿಯಾ ವಿರುದ್ಧ 0-0 ಡ್ರಾ) ಎರಡೂ ತಂಡಗಳು ಸೆಮಿಫೈನಲ್ ತಲುಪಲು ವಿಫಲವಾದ ಬೆನ್ನಲ್ಲೇ ಮಾಜಿ ದಿಗ್ಗಜರು ಮ್ಯಾನೇಜ್‌ಮೆಂಟ್ ವಿರುದ್ಧ ಗುಡುಗಿದ್ದಾರೆ.

​ಪಿ.ಆರ್. ಶ್ರೀಜೇಶ್ (ಮಾಜಿ ನಾಯಕ): “ನಾವು ಶ್ರೇಷ್ಠ ತಂಡಗಳನ್ನು ಸೋಲಿಸುವ ತಂಡ ಕಟ್ಟುತ್ತಿದ್ದೇವೆಯೋ ಅಥವಾ ಕೇವಲ ‘ಉತ್ತಮ ಹಾಕಿ’ ಆಡುವ ತಂಡ ಕಟ್ಟುತ್ತಿದ್ದೇವೆಯೋ? ಪ್ರತಿಯೊಂದು ಸೋಲನ್ನೂ ‘ಕಲಿಯುತ್ತಿದ್ದೇವೆ’ ಎಂದು ಸಮರ್ಥಿಸಿಕೊಳ್ಳಬೇಡಿ. ವಿಶ್ವಕಪ್ ಎಂದರೆ ರಿಹರ್ಸಲ್ ಅಲ್ಲ. ಇಲ್ಲಿ ಹೊಣೆಗಾರಿಕೆ ಯಾರದ್ದು?” ಎಂದು ಕಠಿಣವಾಗಿ ಪ್ರಶ್ನಿಸಿದ್ದಾರೆ.

ವೀರೇನ್ ರಾಸ್ಕಿನ್ಹಾ (ಮಾಜಿ ಆಟಗಾರ): “ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಸಿಗುವ ಚಿನ್ನದ ಪದಕವು ಭಾರತೀಯ ಹಾಕಿಯಲ್ಲಿರುವ ನೈಜ ತಾಂತ್ರಿಕ ಮತ್ತು ಆಯ್ಕೆಯ ಲೋಪಗಳನ್ನು ಮುಚ್ಚಿಹಾಕಬಾರದು. ಹಾಕಿ ಮಂಡಳಿ ತಕ್ಷಣವೇ ಆತ್ಮಾವಲೋಕನ ಮಾಡಿಕೊಳ್ಳಬೇಕು,” ಎಂದು ಎಚ್ಚರಿಸಿದ್ದಾರೆ.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ