ಉಡುಪಿ ಟೋಲ್‌ನಲ್ಲಿ ಮಾಜಿ ಕಮಾಂಡೋ ಶ್ಯಾಮ್ ರಾಜ್‌ಗೆ ಸಂಚರಿಸಲು ತಡೆ: ಅಧಿಕೃತ ಪತ್ರವಿದ್ದರೂ ಹಣ ವಸೂಲಿಗೆ ಯತ್ನ

ಉಡುಪಿ ಟೋಲ್‌ನಲ್ಲಿ ಮಾಜಿ ಕಮಾಂಡೋ ಶ್ಯಾಮ್ ರಾಜ್‌ಗೆ ಸಂಚರಿಸಲು ತಡೆ: ಅಧಿಕೃತ ಪತ್ರವಿದ್ದರೂ ಹಣ ವಸೂಲಿಗೆ ಯತ್ನ

ಯುದ್ಧಭೂಮಿಯಲ್ಲಿ ದೇಶಕ್ಕಾಗಿ ತಮ್ಮ ಅಂಗಾಂಗಗಳ ಸ್ವಾದೀನ ಕಳೆದುಕೊಂಡಿರುವ ಮಾಜಿ ಕಮಾಂಡೋ ಶ್ಯಾಮ್ ರಾಜ್ ಅವರಿಗೆ ಉಡುಪಿಯ ಟೋಲ್ ನಲ್ಲಿ ಅವಮಾನಕರ ವರ್ತನೆ ಎದುರಾಗಿದೆ. ಸೇನೆಯ ಅಧಿಕೃತ ಆದೇಶ ಪತ್ರ (Army Order) ಹೊಂದಿದ್ದರೂ ಸಹ, ಟೋಲ್ ಸಿಬ್ಬಂದಿಗಳು ಅವರಿಂದ ಹಣ ಕೇಳಿರುವ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಶಶಿಧರ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಮಾಜಿ ಸೈನಿಕನನ್ನು ಟೋಲ್ ಪ್ಲಾಜಾದಲ್ಲಿ ತಡೆದು ನಿಲ್ಲಿಸಿ, ವಿನಾಯಿತಿಗೆ ಸಂಬಂಧಿಸಿದ ಅಧಿಕೃತ ದಾಖಲೆ ತೋರಿಸಿದರೂ ಕೂಡ ಹಣ ಪಾವತಿಸಲು ಒತ್ತಾಯಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ದೇಶಕ್ಕಾಗಿ ತ್ಯಾಗ ಮಾಡಿದ ಸೈನಿಕನಿಗೆ ಈ ರೀತಿ ಕಿರುಕುಳ ನೀಡಿರುವುದು ಮಾನವೀಯತೆಯ ಕೊರತೆಯನ್ನು ತೋರಿಸುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://www.facebook.com/share/v/1DP57wYikR

ರಾಜಕಾರಣಿಗಳು ಮತ್ತು ಸಚಿವರು ಜೀರೋ ಟ್ರಾಫಿಕ್, ಟೋಲ್ ಫ್ರೀ ಸೌಲಭ್ಯಗಳನ್ನು ಸುಲಭವಾಗಿ ಅನುಭವಿಸುತ್ತಿರುವ ಸಂದರ್ಭದಲ್ಲಿ, ದೇಶರಕ್ಷಣೆಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಸೈನಿಕನಿಗೆ ಈ ರೀತಿಯ ವರ್ತನೆ ನಡೆಯುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಗಣರಾಜಯೋತ್ಸವ ಹಾಗೂ ಇತರೆ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಸೈನಿಕರ ತ್ಯಾಗವನ್ನು ಹೊಗಳುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣಗಳು ನೆಲಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿಲ್ಲವೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸೈನಿಕರಿಗೆ ನೀಡಬೇಕಾದ ಗೌರವ ಮತ್ತು ಸೌಲಭ್ಯಗಳು ಕಾಗದದಲ್ಲೇ ಉಳಿಯುತ್ತಿವೆಯೇ ಎಂಬ ಅನುಮಾನ ಜನರಲ್ಲಿ ಮೂಡಿದೆ.

ಈ ಘಟನೆಗೆ ಸಂಬಂಧಿಸಿದಂತೆ ಟೋಲ್ ನಿರ್ವಹಣಾ ಸಂಸ್ಥೆಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಅವಮಾನಕಾರಿ ಘಟನೆಗಳು ಮರುಕಳಿಸದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

https://www.facebook.com/share/v/1DP57wYikR

ಅಪರಾಧ ರಾಜ್ಯ ರಾಷ್ಟ್ರೀಯ