​ಪೆರಾಬೆ: ವಿಶೇಷಚೇತನರ ಸಮನ್ವಯ ಗ್ರಾಮಸಭೆ – ಸರ್ಕಾರಿ ಸೌಲಭ್ಯಗಳ ಸದ್ಬಳಕೆಗೆ ಕರೆ

​ಪೆರಾಬೆ: ವಿಶೇಷಚೇತನರ ಸಮನ್ವಯ ಗ್ರಾಮಸಭೆ – ಸರ್ಕಾರಿ ಸೌಲಭ್ಯಗಳ ಸದ್ಬಳಕೆಗೆ ಕರೆ

ಕಡಬ: ಕಡಬ ತಾಲೂಕಿನ ಪೆರಾಬೆ ಗ್ರಾಮಪಂಚಾಯತ್ ವ್ಯಾಪ್ತಿಯ 2025-26ನೇ ಸಾಲಿನ ವಿಶೇಷಚೇತನರ ಸಮನ್ವಯ ಗ್ರಾಮಸಭೆಯು ಪೆರಾಬೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ಕೆ. ಅವರ ಅಧ್ಯಕ್ಷತೆಯಲ್ಲಿ ಇಂದು (ಶುಕ್ರವಾರ) ಯಶಸ್ವಿಯಾಗಿ ನಡೆಯಿತು.

ವಿಶೇಷಚೇತನರಿಗೆ ಲಭ್ಯವಿರುವ ಸೌಲಭ್ಯಗಳ ಮಾಹಿತಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ (MRW) ಶ್ರೀ ನವೀನ್ ಕುಮಾರ್ ಅವರು ವಿಕಲಚೇತನರ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. “ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೂಲಕ ಶೇ. 40 ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ 800 ರೂ. ಹಾಗೂ ಶೇ. 75 ಕ್ಕಿಂತ ಹೆಚ್ಚು ಅಂಗವೈಕಲ್ಯ ಇರುವವರಿಗೆ 1400 ರೂ. ಮಾಶಾಸನ ನೀಡಲಾಗುತ್ತಿದೆ. ವಿಕಲಚೇತನರ ಅಧಿನಿಯಮದ ಪ್ರಕಾರ ಯಾವುದೇ ತಾರತಮ್ಯ ಮಾಡುವಂತಿಲ್ಲ; ಶಿಕ್ಷಣ ಮತ್ತು ಇತರ ಸೌಲಭ್ಯಗಳಲ್ಲಿ ಸಮಾನ ಅವಕಾಶ ಕಲ್ಪಿಸುವುದು ಕಾಯ್ದೆಯ ಮುಖ್ಯ ಉದ್ದೇಶವಾಗಿದೆ,” ಎಂದು ಅವರು ವಿವರಿಸಿದರು.

ಜೊತೆಗೆ, ರಿಯಾಯಿತಿ ದರದ ಬಸ್ ಪಾಸ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಉನ್ನತ ಶಿಕ್ಷಣದ ಶುಲ್ಕ ಮರುಪಾವತಿ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್, ಬ್ರೈಲ್ ಕಿಟ್ ಹಾಗೂ ಕೃತಕ ಅಂಗಾಂಗಗಳ ಸೌಲಭ್ಯಗಳ ಕುರಿತು ಅವರು ಸಮಗ್ರ ಮಾಹಿತಿ ನೀಡಿದರು.

ಅಂಗನವಾಡಿ ಮೇಲ್ವಿಚಾರಕಿ ಭವಾನಿ ಅವರು ಮಾತನಾಡಿ, “ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ಮಹಿಳೆಯರ ಶೋಷಣೆಗೆ ಮೂಲ ಕಾರಣವಾಗಿದೆ. ಇದನ್ನು ಹೋಗಲಾಡಿಸಲು ಶಿಕ್ಷಣ ಮತ್ತು ಕಟ್ಟುನಿಟ್ಟಾದ ಕಾನೂನು ಜಾರಿ ಅಗತ್ಯ. ಮಹಿಳಾ ಸಾಂತ್ವನ ಕೇಂದ್ರಗಳ ಮೂಲಕ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಉಚಿತ ಕಾನೂನು ನೆರವು ಪಡೆಯಲು ಅವಕಾಶವಿದೆ,” ಎಂದು ಜಾಗೃತಿ ಮೂಡಿಸಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ವೇದಾವತಿ, ಸದಸ್ಯರಾದ ಚಂದ್ರಶೇಖರ, ಕಾವೇರಿ, ಮೋಹಿನಿ, ಲೀಲಾವತಿ, ಕುಮಾರ, ಸದಾನಂದ, ಸುಶೀಲ ಉಪಸ್ಥಿತರಿದ್ದರು. ಅಲ್ಲದೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಆಲಂಕಾರು ಗ್ರಾ.ಪಂ ಪುನರ್ವಸತಿ ಕಾರ್ಯಕರ್ತ ಮೋನಪ್ಪ ಬಿ., ರಾಮಕುಂಜ ಗ್ರಾ.ಪಂ ಕಾರ್ಯಕರ್ತೆ ಚೇತನಾ, ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮದ ವಿಶೇಷಚೇತನರು ಮತ್ತು ಅವರ ಪೋಷಕರು ಭಾಗವಹಿಸಿದ್ದರು.

ಪ್ರಾದೇಶಿಕ