ಭಾರತದ ಐತಿಹಾಸಿಕ ಸೋಮನಾಥ ದೇವಾಲಯದ ಮೇಲೆ ನಡೆದ ದಾಳಿಗಳ ವಿರುದ್ಧ ಹೋರಾಡಿ ಬಲಿದಾನಗೈದ ವೀರರ ಸ್ಮರಣಾರ್ಥವಾಗಿ ಆಯೋಜಿಸಲಾಗಿದ್ದ ಭವ್ಯ ‘ಶೌರ್ಯ ಯಾತ್ರೆ’ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಜವರಿ 11) ಯಶಸ್ವಿಯಾಗಿ ಮುನ್ನಡೆಸಿದರು.

’ಸೋಮನಾಥ ಸ್ವಾಭಿಮಾನ ಪರ್ವ’ದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಈ ಯಾತ್ರೆಯು ಭಾರತದ ಸಾಂಸ್ಕೃತಿಕ ಚೇತರಿಕೆ ಮತ್ತು ಶೌರ್ಯದ ಸಂಕೇತವಾಗಿ ಗಮನ ಸೆಳೆಯಿತು.
108 ಕುದುರೆಗಳ ಭವ್ಯ ಮೆರವಣಿಗೆ ಗಿರ್ ಸೋಮನಾಥ ಜಿಲ್ಲೆಯಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಅಲಂಕೃತ ತೆರೆದ ವಾಹನದಲ್ಲಿ ಮೆರವಣಿಗೆ ಸಾಗಿದರು. ಯಾತ್ರೆಯ ಪ್ರಮುಖ ಆಕರ್ಷಣೆಯಾಗಿ 108 ಕುದುರೆಗಳ ದಳವು ಸಾಗಿಬಂದಿತು. ಇದು ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣತೆತ್ತ ಅಸಂಖ್ಯಾತ ವೀರರ ಸಾಹಸ ಮತ್ತು ತ್ಯಾಗವನ್ನು ಬಿಂಬಿಸುವ ಸಾಂಕೇತಿಕ ನಮನವಾಗಿತ್ತು.
ಯಾತ್ರೆಯ ಉದ್ದಕ್ಕೂ ಸಾವಿರಾರು ಭಕ್ತರು ಮತ್ತು ಸ್ಥಳೀಯರು ರಸ್ತೆಯ ಎರಡೂ ಬದಿಯಲ್ಲಿ ನಿಂತು ಪ್ರಧಾನಿಯವರ ಮೇಲೆ ಪುಷ್ಪವೃಷ್ಟಿ ಮಾಡಿದರು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಈ ಸಂದರ್ಭದಲ್ಲಿ ಪ್ರಧಾನಿಯವರ ಜೊತೆಗಿದ್ದರು.

ದರ್ಶನ ಮತ್ತು ಪೂಜೆ ಶೌರ್ಯ ಯಾತ್ರೆಯ ನಂತರ ಪ್ರಧಾನಿ ಮೋದಿ ಅವರು ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ದರ್ಶನ ಪಡೆದರು. ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಸೋಮನಾಥವು ಕೇವಲ ಒಂದು ಮಂದಿರವಲ್ಲ, ಅದು ಭಾರತದ ಚೇತರಿಕೆ ಮತ್ತು ಆತ್ಮಗೌರವದ ಸಂಕೇತ” ಎಂದು ಬಣ್ಣಿಸಿದರು.
ಈ ಯಾತ್ರೆಗಾಗಿ ಗುಜರಾತ್ ಪೋಲಿಸ್‌ನ ಅಶ್ವದಳದ ಅರಬ್ ಮತ್ತು ಕಾಠಿಯಾವಾಡಿ ತಳಿಯ ಕುದುರೆಗಳನ್ನು ವಿಶೇಷವಾಗಿ ತರಬೇತಿಗೊಳಿಸಲಾಗಿತ್ತು. ಇಡೀ ವಾತಾವರಣವು ‘ಜೈ ಸೋಮನಾಥ್’ ಮತ್ತು ‘ಹರ ಹರ ಮಹಾದೇವ್’ ಘೋಷಣೆಗಳಿಂದ ಮೊಳಗಿತ್ತು.

