ಕಾಸರಗೋಡು: ಮರು ಸರ್ವೇ ಸಂದರ್ಭದಲ್ಲಿ ಉಂಟಾದ ತಪ್ಪುಗಳನ್ನು ಸರಿಪಡಿಸಲು ಮತ್ತು ಭೂಮಿಯನ್ನು ಮರು ಅಳತೆ ಮಾಡಲು ಭೂಮಾಪನ ಇಲಾಖೆ ಅಧಿಕಾರಿಗಳ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ಮಧ್ಯವರ್ತಿಯೊಬ್ಬನನ್ನು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ದಳ (VACB) ಬಂಧಿಸಿದೆ.ಬಂಧಿತ ಆರೋಪಿಯನ್ನು ಉದುಮ ನಿವಾಸಿ ಹಾಶಿಂ ಪಿ.ಹೆಚ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಕಾಸರಗೋಡಿನ ಉದುಮ ಮೂಲದ ಹಾಶಿಂ, ಭೂದಾಖಲೆಗಳಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿಕೊಡುವ ಭರವಸೆ ನೀಡಿ ಅರ್ಜಿದಾರರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಶನಿವಾರ ಸಂಜೆ ಸುಮಾರು 15,000 ರೂಪಾಯಿಗಳನ್ನು ಲಂಚವಾಗಿ ಪಡೆಯುತ್ತಿದ್ದ ಸಂದರ್ಭದಲ್ಲಿ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿ, ಆತನನ್ನು ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಮರು ಸರ್ವೇಯಲ್ಲಿ ಉಂಟಾಗಿದ್ದ ತಾಂತ್ರಿಕ ತಪ್ಪುಗಳನ್ನು ಸರಿಪಡಿಸಲು ಅಧಿಕಾರಿಗಳ ಹೆಸರಿನಲ್ಲಿ ಈತ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದ್ದು, ಈ ಪ್ರಕರಣದಲ್ಲಿ ಇಲಾಖೆಯ ಯಾವ ಅಧಿಕಾರಿಗಳ ಕೈವಾಡವಿದೆ ಎಂಬ ಬಗ್ಗೆ ವಿಜಿಲೆನ್ಸ್ ತನಿಖೆ ಚುರುಕುಗೊಳಿಸಿದೆ.

