ಭಾರತ ಪ್ರಗತಿಯತ್ತ, ಕರ್ನಾಟಕ ಅಧೋಗತಿಯತ್ತ – ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಭಾರತ ಪ್ರಗತಿಯತ್ತ, ಕರ್ನಾಟಕ ಅಧೋಗತಿಯತ್ತ – ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ದಾಪುಗಾಲು ಹಾಕುತ್ತಿದ್ದರೆ, ಕರ್ನಾಟಕವು ಕಾಂಗ್ರೆಸ್ ಆಡಳಿತದಲ್ಲಿ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರವಾಗಿ ಟೀಕಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ‘ಅಟಲ್ ಪ್ರಶಸ್ತಿ’ ಪ್ರದಾನ ಹಾಗೂ ‘ಸುಶಾಸನ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಕರ್ನಾಟಕವು ದೇಶಕ್ಕೇ ಮಾದರಿ ರಾಜ್ಯವಾಗಿತ್ತು ಎಂದು ಸ್ಮರಿಸಿದ ಕುಮಾರಸ್ವಾಮಿ, ಪ್ರಸ್ತುತ ಸರ್ಕಾರದ ನೀತಿಗಳಿಂದಾಗಿ ರಾಜ್ಯವು ತನ್ನ ಗರಿಮೆಯನ್ನು ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. “ಕರ್ನಾಟಕವು ಅತ್ಯುತ್ತಮ ಆಡಳಿತ ಮತ್ತು ಅಭಿವೃದ್ಧಿ ಮಾದರಿಗೆ ಹೆಸರಾಗಿತ್ತು. ಆದರೆ ಇಂದು ಕಾಂಗ್ರೆಸ್ ಆಡಳಿತದಲ್ಲಿ ಆ ಎಲ್ಲಾ ಹಿರಿಮೆಗಳು ಮಣ್ಣು ಪಾಲಾಗುತ್ತಿವೆ” ಎಂದು ಅವರು ಗುಡುಗಿದರು.

ವಾಜಪೇಯಿ ಅವರ ಕೊಡುಗೆಗಳನ್ನು ಸ್ಮರಿಸಿದ ಅವರು, “ವಾಜಪೇಯಿ ಅವರ ಕಾಲದ ಸುಶಾಸನ ಇಂದು ದೇಶಕ್ಕೆ ದಾರಿದೀಪವಾಗಿದೆ. ಪ್ರಧಾನಿ ಮೋದಿ ಅವರು ಅದೇ ಹಾದಿಯಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಆಡಳಿತದ ಹಳಿ ತಪ್ಪಿದೆ” ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ‘ಅಟಲ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ರಾಜಕೀಯ ರಾಜ್ಯ ರಾಷ್ಟ್ರೀಯ