ಚಿತ್ರದುರ್ಗ: ಹಿರಿಯೂರು ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ಮಂದಿ ಸಜೀವ ದಹನವಾದ ಘಟನೆ ಇಡೀ ರಾಜ್ಯವನ್ನೇ ನಡುಗಿಸಿದೆ. ಈ ದುರಂತದ ಬಗ್ಗೆ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಬಸ್ ಚಾಲಕ ರಫೀಕ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಅಪಘಾತದ ಆ ಭೀಕರ ಕ್ಷಣಗಳನ್ನು ವಿವರಿಸಿದ್ದಾರೆ.

ವೇಗವಾಗಿ ಬಂದ ಕಂಟೈನರ್ ಲಾರಿ: ಇಂದು ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದೆ. ಘಟನೆ ಕುರಿತು ಮಾಹಿತಿ ನೀಡಿದ ಚಾಲಕ ರಫೀಕ್, “ನಾನು ಬಸ್ಸನ್ನು 60 ರಿಂದ 70 ಕಿ.ಮೀ ವೇಗದಲ್ಲಿ ಚಲಾಯಿಸುತ್ತಿದ್ದೆ. ಆಗ ಎದುರುಗಡೆಯಿಂದ ಅತೀ ವೇಗವಾಗಿ ಬಂದ ಕಂಟೈನರ್ ಲಾರಿ ಇದ್ದಕ್ಕಿದ್ದಂತೆ ಡಿವೈಡರ್ ದಾಟಿ ನಮ್ಮ ಬಸ್ಗೆ ಬಂದು ಡಿಕ್ಕಿ ಹೊಡೆಯಿತು,” ಎಂದು ತಿಳಿಸಿದ್ದಾರೆ.
ನಿಯಂತ್ರಣ ತಪ್ಪಿದ ವಾಹನ: ”ಲಾರಿ ವೇಗವಾಗಿ ನುಗ್ಗಿ ಬರುತ್ತಿರುವುದನ್ನು ಕಂಡು ನಾನು ಬಸ್ಸನ್ನು ನಿಯಂತ್ರಿಸಲು ಶಕ್ತಿಮೀರಿ ಪ್ರಯತ್ನಿಸಿದೆ. ಆದರೆ ಕಂಟೈನರ್ ಲಾರಿ ಅಷ್ಟು ವೇಗವಾಗಿ ಬಂದು ಡಿಕ್ಕಿ ಹೊಡೆದ ಕಾರಣ ಏನೂ ಮಾಡಲು ಸಾಧ್ಯವಾಗಲಿಲ್ಲ. ಡಿಕ್ಕಿಯಾದ ನಂತರ ಏನಾಯಿತು ಎಂಬುದು ನನಗೆ ನೆನಪಿಲ್ಲ. ನನ್ನನ್ನು ಹೇಗೆ ಹೊರಗೆ ಕರೆತಂದರು ಎಂಬುದು ಸಹ ತಿಳಿದಿಲ್ಲ,” ಎಂದು ಆಸ್ಪತ್ರೆಯ ಬೆಡ್ ಮೇಲೆ ರಫೀಕ್ ನೋವು ತೋಡಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ನಡೆದ ಈ ಅಪಘಾತದಲ್ಲಿ, ಕಂಟೈನರ್ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಖಾಸಗಿ ಲಗ್ಷುರಿ ಸ್ಲೀಪರ್ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಿದ್ರೆಯಲ್ಲಿದ್ದ ಪ್ರಯಾಣಿಕರು ಹೊರಬರಲಾಗದೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

