ನವದೆಹಲಿ (ಡಿ. 24): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಬುಧವಾರ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್ LVM3-M6 ಮೂಲಕ ಅಮೆರಿಕಾದ ಅತಿ ಭಾರದ ವಾಣಿಜ್ಯ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಭಾರತದ ಬಾಹ್ಯಾಕಾಶ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದೆ.

ಈ ಮಹತ್ತರ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಈ ಯಶಸ್ಸು ಜಾಗತಿಕ ವಾಣಿಜ್ಯ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ಪಾತ್ರವನ್ನು ಬಲಪಡಿಸುವುದಲ್ಲದೆ, ‘ಆತ್ಮನಿರ್ಭರ ಭಾರತ’ದ ಸಂಕಲ್ಪಕ್ಕೆ ಮತ್ತಷ್ಟು ಶಕ್ತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.
”LVM3 ರಾಕೆಟ್‌ನ ಈ ಸಾಧನೆಯು ಭಾರತದ ಬಾಹ್ಯಾಕಾಶ ಕ್ಷೇತ್ರದ ಹೆಮ್ಮೆಯ ಮೈಲಿಗಲ್ಲು. ಇದು ಜಾಗತಿಕ ವಾಣಿಜ್ಯ ಮಾರುಕಟ್ಟೆಯಲ್ಲಿ ನಮ್ಮ ಪಾತ್ರವನ್ನು ಬಲಪಡಿಸಿದೆ. ವಿಜ್ಞಾನಿಗಳ ಕಠಿಣ ಪರಿಶ್ರಮಕ್ಕೆ ನನ್ನ ಅಭಿನಂದನೆಗಳು.” – ನರೇಂದ್ರ ಮೋದಿ, ಪ್ರಧಾನ ಮಂತ್ರಿ
ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪ್ರಾಬಲ್ಯ. ಈ ಹಿಂದೆ ಭಾರೀ ತೂಕದ ಉಪಗ್ರಹಗಳ ಉಡಾವಣೆಗಾಗಿ ವಿಶ್ವದ ಇತರ ರಾಷ್ಟ್ರಗಳನ್ನು ಅವಲಂಬಿಸಬೇಕಿತ್ತು. ಆದರೆ ಇಂದು ಭಾರತವೇ ಇತರ ದೇಶಗಳ ಬೃಹತ್ ಉಪಗ್ರಹಗಳನ್ನು ಅತ್ಯಂತ ನಿಖರವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಉಡಾವಣೆ ಮಾಡುತ್ತಿದೆ. ಇದು ಜಾಗತಿಕ ವಾಣಿಜ್ಯ ಉಡಾವಣಾ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಕೇಂದ್ರವನ್ನಾಗಿ ಮಾಡಿದೆ.

