ಭಾರತದ ಪರಮಾಣು ವಲಯದಲ್ಲಿ ಮಹತ್ವದ ಬದಲಾವಣೆ: ‘ಶಾಂತಿ’ ಮಸೂದೆಗೆ ರಾಷ್ಟ್ರಪತಿ ಅಂಕಿತ

ಭಾರತದ ಪರಮಾಣು ವಲಯದಲ್ಲಿ ಮಹತ್ವದ ಬದಲಾವಣೆ: ‘ಶಾಂತಿ’ ಮಸೂದೆಗೆ ರಾಷ್ಟ್ರಪತಿ ಅಂಕಿತ

ನವದೆಹಲಿ (ಡಿ. 21): ಭಾರತದ ಅಣುಶಕ್ತಿ ವಲಯದಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶದ ‘ಶಾಂತಿ’ (Sustainable Harnessing and Advancement of Nuclear Energy for Transforming India) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಧಿಕೃತವಾಗಿ ಅಂಕಿತ ಹಾಕಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರವಾಗಿದ್ದ ಈ ಮಸೂದೆಗೆ ಇದೀಗ ರಾಷ್ಟ್ರಪತಿಗಳ ಸಮ್ಮತಿ ಸಿಕ್ಕಿದ್ದು, ಅಣುಶಕ್ತಿ ವಲಯದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಬಾಗಿಲು ತೆರೆದಂತಾಗಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

ಈ ಹೊಸ ಕಾಯ್ದೆಯ ಮುಖ್ಯಾಂಶಗಳು:​ಎಲ್ಲಾ ಕಾನೂನುಗಳ ವಿಲೀನ:

  • ನಾಗರಿಕ ಪರಮಾಣು ವಲಯಕ್ಕೆ (Civil Nuclear Sector) ಸಂಬಂಧಿಸಿದಂತೆ ಈ ಹಿಂದೆ ಇದ್ದ ಎಲ್ಲಾ ಕಾನೂನುಗಳನ್ನು ಈ ಮಸೂದೆಯು ತನ್ನೊಳಗೆ ವಿಲೀನಗೊಳಿಸಿಕೊಂಡಿದೆ.​
  • ಖಾಸಗಿ ವಲಯಕ್ಕೆ ಮುಕ್ತ ಅವಕಾಶ: ಇಷ್ಟು ದಿನ ಕೇವಲ ಸರ್ಕಾರದ ನಿಯಂತ್ರಣದಲ್ಲಿದ್ದ ಅಣುಶಕ್ತಿ ಉತ್ಪಾದನೆ ಮತ್ತು ಅಭಿವೃದ್ಧಿ ವಲಯದಲ್ಲಿ ಇನ್ಮುಂದೆ ಖಾಸಗಿ ಕಂಪನಿಗಳು ಅಥವಾ ಹೂಡಿಕೆದಾರರು ಭಾಗವಹಿಸಲು ಈ ಕಾಯ್ದೆ ಅವಕಾಶ ಕಲ್ಪಿಸುತ್ತದೆ.​
  • ಸುಸ್ಥಿರ ಅಭಿವೃದ್ಧಿ: ಭಾರತದ ಪರಿವರ್ತನೆಗಾಗಿ ಪರಮಾಣು ಶಕ್ತಿಯನ್ನು ಸುಸ್ಥಿರವಾಗಿ ಬಳಸಿಕೊಳ್ಳುವುದು ಮತ್ತು ಅದನ್ನು ಅಭಿವೃದ್ಧಿಪಡಿಸುವುದು ಈ ಕಾಯ್ದೆಯ ಮುಖ್ಯ ಗುರಿಯಾಗಿದೆ.

ರಾಷ್ಟ್ರಪತಿಗಳ ಅಂಕಿತದೊಂದಿಗೆ ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದಿದ್ದು, ಭಾರತದ ಇಂಧನ ವಲಯದಲ್ಲಿ ಹೊಸ ಮೈಲಿಗಲ್ಲಾಗುವ ನಿರೀಕ್ಷೆಯಿದೆ.

ರಾಷ್ಟ್ರೀಯ