ಬೆಂಗಳೂರು: ಕರ್ನಾಟಕ ಸರ್ಕಾರ ಉಭಯ ಸದನಗಳಲ್ಲಿ ಅಂಗೀಕರಿಸಿರುವ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ವಿಧೇಯಕ-2025’ಕ್ಕೆ ಅಂಕಿತ ಹಾಕಬಾರದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ರಾಜ್ಯಪಾಲರನ್ನು ಭೇಟಿ ಮಾಡಿದ ಅವರು, ಈ ವಿಧೇಯಕವು ಅಸ್ಪಷ್ಟತೆಯಿಂದ ಕೂಡಿದ್ದು, ದುರುಪಯೋಗವಾಗುವ ಸಾಧ್ಯತೆ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಸಂವಿಧಾನದ 200ನೇ ವಿಧಿಯಡಿ ರಾಷ್ಟ್ರಪತಿಗೆ ರವಾನಿಸಲು ಮನವಿ, ಈ ಕಾಯ್ದೆಯು ಪ್ರಜಾಪ್ರಭುತ್ವದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಿದೆ. ಆದ್ದರಿಂದ, ರಾಜ್ಯಪಾಲರು ಈ ವಿಧೇಯಕಕ್ಕೆ ಸಹಿ ಹಾಕುವ ಬದಲಿಗೆ, ಸಂವಿಧಾನದ 200ನೇ ವಿಧಿಯಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪರಿಶೀಲನೆಗೆ ಕಳುಹಿಸಿಕೊಡಬೇಕು ಎಂದು ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಈಗಾಗಲೇ ವಿಧಾನ ಪರಿಷತ್ ಮತ್ತು ವಿಧಾನಸಭೆ ಎರಡರಲ್ಲೂ ಅಂಗೀಕಾರಗೊಂಡಿರುವ ಈ ವಿಧೇಯಕವು ರಾಜ್ಯಪಾಲರ ಅಂಕಿತಕ್ಕಾಗಿ ರಾಜಭವನಕ್ಕೆ ತಲುಪಲಿದೆ. ಈ ಹಂತದಲ್ಲಿ ಪ್ರತಿಪಕ್ಷ ಬಿಜೆಪಿ ಮತ್ತು ಕೇಂದ್ರ ಸಚಿವರು ವಿರೋಧ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

