ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿ, ಬಳಿಕ ತಾನೂ ಆತ್ಮಹತ್ಯೆ!

ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿ, ಬಳಿಕ ತಾನೂ ಆತ್ಮಹತ್ಯೆ!

ರಾಮನಗರ ಜಿಲ್ಲೆಯ ಹಗಲಹಳ್ಳಿ ಗ್ರಾಮದಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ. ಕ್ಷುಲ್ಲಕ ಕಾರಣಕ್ಕೆ ದಂಪತಿಗಳ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಪತ್ನಿಯನ್ನ ಕೊಲೆ ಮಾಡಿದ ಪತಿ ತಾನೂ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.

ಮೃತರನ್ನು ನವೀನ್ ಕುಮಾರ್ (35) ಮತ್ತು ಪತ್ನಿ ವತ್ಸಲಾ (30) ಎಂದು ಗುರುತಿಸಲಾಗಿದೆ. ಈ ದಂಪತಿ ಕಳೆದ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಏಳು ವರ್ಷದ ಹೆಣ್ಣು ಮಗಳಿದ್ದಾಳೆ. ಘಟನೆ ನಡೆದ ಸಮಯದಲ್ಲಿ ಮಗು ಅಜ್ಜಿಯ ಮನೆಯಲ್ಲಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದೆ.

ನಡೆದಿದ್ದೇನು? ಡಿಸೆಂಬರ್ 15 ರಂದು ರಾತ್ರಿ ಮನೆಯಲ್ಲಿ ದಂಪತಿಗಳ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಈ ವೇಳೆ ಆವೇಶಕ್ಕೊಳಗಾದ ನವೀನ್ ಕುಮಾರ್ ಪತ್ನಿ ವತ್ಸಲಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡಿಸೆಂಬರ್ 18ರ ಗುರುವಾರದಂದು ಈ ವಿಷಯ ಬೆಳಕಿಗೆ ಬಂದಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾಮನಗರ ತಾಲ್ಲೂಕಿನ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಎಂಟು ವರ್ಷಗಳ ಸಂಸಾರ ಹೀಗೆ ಸ್ಮಶಾನದಂತಾಗಿರುವುದು ಮತ್ತು ಮಗು ಅನಾಥವಾಗಿರುವುದು ಗ್ರಾಮಸ್ಥರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.

ಅಪರಾಧ ರಾಜ್ಯ