ಬೆಳಗಾವಿ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಐಷಾರಾಮಿ ಸೌಲಭ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರವಾದ ಬಹುತೇಕ ವಿಡಿಯೋಗಳು ಹಿಂದಿನ ಬಿಜೆಪಿ ಸರ್ಕಾರದ ಅವಧಿಯವು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗುರುವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಗುರುವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಎಂಎಲ್‌ಸಿ ಕಿಶೋರ್ ಕುಮಾರ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ದಾಖಲೆಗಳಿವೆ ಎಂದ ಸಚಿವರು ಜೈಲಿನಲ್ಲಿ ಕೈದಿಗಳು ರಾಜಾತಿಥ್ಯ ಪಡೆಯುತ್ತಿರುವ ದೃಶ್ಯಗಳು ಹಳೆಯವು ಎಂದು ಪ್ರತಿಪಾದಿಸಿದ ಸಚಿವರು, “ಈ ವಿಡಿಯೋಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯದ್ದಲ್ಲ. ಇವು ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಘಟನೆಗಳಾಗಿದ್ದು, ಇದಕ್ಕೆ ಪೂರಕವಾದ ದಾಖಲೆಗಳು ನನ್ನ ಬಳಿ ಇವೆ,” ಎಂದು ಹೇಳಿದರು. ಕಾರಾಗೃಹಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ತಡೆಯಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಪರಮೇಶ್ವರ್ ಇದೇ ವೇಳೆ ಸ್ಪಷ್ಟಪಡಿಸಿದರು.
ಪರಪ್ಪನ ಅಗ್ರಹಾರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿರೋಧ ಪಕ್ಷಗಳು ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಸಚಿವರು ಈ ಸ್ಪಷ್ಟನೆ ನೀಡುವ ಮೂಲಕ ಚೆಂಡನ್ನು ಬಿಜೆಪಿ ಅಂಗಳಕ್ಕೆ ತಳ್ಳಿದ್ದಾರೆ.

