ಚಿಕಿತ್ಸೆ ಸಿಗದೆ ರಸ್ತೆಯಲ್ಲೇ ಪ್ರಾಣಬಿಟ್ಟ ಮೆಕ್ಯಾನಿಕ್: ಪತಿಯ ಜೀವ ಉಳಿಸಲು ಅಂಗಲಾಚಿದ ಪತ್ನಿ!

ಚಿಕಿತ್ಸೆ ಸಿಗದೆ ರಸ್ತೆಯಲ್ಲೇ ಪ್ರಾಣಬಿಟ್ಟ ಮೆಕ್ಯಾನಿಕ್: ಪತಿಯ ಜೀವ ಉಳಿಸಲು ಅಂಗಲಾಚಿದ ಪತ್ನಿ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಮನುಷ್ಯತ್ವ ಮರೆತ ಘಟನೆ ಬೆಳಕಿಗೆ ಬಂದಿದೆ. ಎದೆನೋವಿನಿಂದ ಬಳಲುತ್ತಿದ್ದ ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಸೂಕ್ತ ಚಿಕಿತ್ಸೆ ಮತ್ತು ಆಂಬುಲೆನ್ಸ್ ಸಿಗದೆ, ರಸ್ತೆಯಲ್ಲೇ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಡಿಸೆಂಬರ್ 13ರಂದು ನಡೆದಿದೆ.

ಬಾಲಾಜಿ ನಗರದ ನಿವಾಸಿ, 34 ವರ್ಷದ ಮೆಕ್ಯಾನಿಕ್ ವೆಂಕಟರಮಣನ್ ಮೃತ ದುರ್ದೈವಿ. ಡಿಸೆಂಬರ್ 13ರಂದು ಮುಂಜಾನೆ ಸುಮಾರು 3:30ರ ಸುಮಾರಿಗೆ ವೆಂಕಟರಮಣನ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರ ಪತ್ನಿ ರೂಪಾ ಅವರು ಪತಿಯನ್ನು ಸ್ಕೂಟರ್ ಮೇಲೆ ಕೂರಿಸಿಕೊಂಡು ಹತ್ತಿರದ ಖಾಸಗಿ ಆಸ್ಪತ್ರೆಗೆ ಧಾವಿಸಿದ್ದಾರೆ.

ಕುಟುಂಬಸ್ಥರ ಆರೋಪದಂತೆ, ಮೊದಲು ಹೋದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿಲ್ಲ ಎಂಬ ಕಾರಣ ನೀಡಿ ಪ್ರಾಥಮಿಕ ಚಿಕಿತ್ಸೆಯನ್ನು ನಿರಾಕರಿಸಲಾಗಿದೆ. ಕನಿಷ್ಠ ಪ್ರಥಮ ಚಿಕಿತ್ಸೆ ಅಥವಾ ಆಂಬುಲೆನ್ಸ್ ವ್ಯವಸ್ಥೆ ಮಾಡದೆ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ವಿಧಿ ಇಲ್ಲದೆ ರೂಪಾ ಅವರು ಪತಿಯನ್ನು ಸ್ಕೂಟರ್‌ನಲ್ಲೇ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ.

ವೈರಲ್ ಆದ ಸಿಸಿಟಿವಿ ದೃಶ್ಯ: ಮತ್ತೊಂದು ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆ ವೆಂಕಟರಮಣನ್ ಅವರು ಸ್ಕೂಟರ್‌ನಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ಪತ್ನಿ ರೂಪಾ ಕೂಡ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಮಲಗಿದ್ದ ಪತಿಯ ಜೀವ ಉಳಿಸಲು ರೂಪಾ ಅವರು ದಾರಿಹೋಕರಲ್ಲಿ ಕೈಮುಗಿದು ಸಹಾಯಕ್ಕಾಗಿ ಬೇಡುತ್ತಿರುವ ಸಿಸಿಟಿವಿ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. “ನನ್ನ ಪತಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ದರೆ ಅವರು ಬದುಕುತ್ತಿದ್ದರು. ಆಸ್ಪತ್ರೆಯವರು ಮಾನವೀಯತೆ ಮರೆತಿದ್ದಾರೆ” ಎಂದು ಮೃತರ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಅಪಘಾತ ರಾಜ್ಯ