ಬೆಂಗಳೂರು: (ಡಿ. 3) ಬಹುಭಾಷಾ ನಟ ರಣವೀರ್ ಸಿಂಗ್ ಅವರು ‘ಕಾಂತಾರ’ ಸಿನಿಮಾದಲ್ಲಿ ರಿಷಬ್ ಶೆಟ್ಟಿಯವರ ಅಭಿನಯವನ್ನು ವಿಚಿತ್ರವಾಗಿ ಅಣಕಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ, ಬುಧವಾರ ಬೆಂಗಳೂರಿನಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ.

ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದ್ದು, ಸದ್ಯಕ್ಕೆ ಯಾವುದೇ ಎಫ್ಐಆರ್ (FIR) ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಣವೀರ್ ಸಿಂಗ್ ಅವರು ಇತ್ತೀಚೆಗೆ ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಕಾಂತಾರ’ ಸಿನಿಮಾದ ದೈವ ಪಾತ್ರವನ್ನು ಅಣಕಿಸುವ ರೀತಿಯಲ್ಲಿ ವಿಚಿತ್ರ ಮುಖಭಾವ ಮಾಡಿ, ದೈವವನ್ನು ದೆವ್ವ ಎಂದು ಉಲ್ಲೇಖಿಸಿ, ಅದನ್ನು ಹಾಸ್ಯಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಡಿಯೋ ತುಣುಕುಗಳು ಮತ್ತು ಸುದ್ದಿ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಕರಾವಳಿಯ ಜನಸಂಸ್ಕೃತಿಯ ಆಚರಣೆಗೆ ಮಾಡಿದ ಅವಮಾನ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ವಿವರ: “ಈ ಪವಿತ್ರ ಆಚರಣೆಯನ್ನು ಅಪಹಾಸ್ಯ ಮಾಡುವ ಮೂಲಕ ನಟ ರಣವೀರ್ ಸಿಂಗ್ ಅವರು ಹಿಂದೂ ಧರ್ಮದ ಶ್ರದ್ಧಾ ಕೇಂದ್ರವಾದ ದೈವಾರಾಧನೆ ಮತ್ತು ಭೂತ ಕೋಲದ ಬಗ್ಗೆ ವಿಶ್ವಾದ್ಯಂತ ಗೌರವ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ್ದಾರೆ. ಇದು ಧಾರ್ಮಿಕ ಭಾವನೆಗಳಿಗೆ ಘಾಸಿ ತಂದಿದೆ,” ಎಂದು ವಕೀಲ ಪ್ರಶಾಂತ್ ಮೆತ್ತಲ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ
‘ಕಾಂತಾರ’ ಚಿತ್ರವು ದೈವಾರಾಧನೆಯ ಪಾವಿತ್ರ್ಯತೆಯನ್ನು ಎತ್ತಿ ಹಿಡಿದು ಜಾಗತಿಕ ಮನ್ನಣೆ ಪಡೆದಿತ್ತು. ಆದರೆ, ರಣವೀರ್ ಸಿಂಗ್ ಅವರ ಈ ವರ್ತನೆಯಿಂದ ಕರಾವಳಿ ಮತ್ತು ಕರ್ನಾಟಕದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅನೇಕರು ನಟ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಸದ್ಯ ಪೊಲೀಸರು ದೂರು ಸ್ವೀಕರಿಸಿದ್ದು, ಕಾನೂನು ತಜ್ಞರ ಸಲಹೆಯ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

