ಉಡುಪಿ: ಶ್ರೀಕೃಷ್ಣ ಮಠದ ಕನಕ ಕಿಂಡಿಗೆ ತಾನು ಸೇವಾ ರೂಪದಲ್ಲಿ ಸಮರ್ಪಿಸಿದ ಸ್ವರ್ಣ ಕವಚವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವ ಬಗ್ಗೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚಿನ್ನದ ಕವಚದ ಲೋಕಾರ್ಪಣೆಯು ನಡೆದಿತ್ತು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ್, “ಕನಕ ಕಿಂಡಿಗೆ ಸ್ವರ್ಣ ಕವಚ ಸಮರ್ಪಿಸಿದ್ದು ನನ್ನ ಪಾಲಿನ ದೊಡ್ಡ ಪುಣ್ಯ. ಪ್ರಧಾನಿ ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ದೂರದಲ್ಲಾದರೂ ನಿಂತು ನೋಡುವ ಆಸೆ ನನಗಿತ್ತು, ಆದರೆ ಕಾರಣಾಂತರಗಳಿಂದ ಅದು ತಪ್ಪಿ ಹೋಗಿದೆ. ಅದರ ಬಗ್ಗೆ ನನಗೆ ಕಿಂಚಿತ್ತೂ ಬೇಸರವಿಲ್ಲ” ಎಂದಿದ್ದಾರೆ.
ಆದಾಗ್ಯೂ, ಕಾರ್ಯಕ್ರಮದಲ್ಲಿ ಭಾಗವಹಿಸದಿರುವ ಬಗ್ಗೆ ರಾಜಕೀಯ ಚರ್ಚೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, “ಯಾರಾದರೂ ನನ್ನನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿದ್ದಾರೆ ಅಂತಾ ನನಗೆ ಗೊತ್ತಿಲ್ಲ. ಒಂದು ವೇಳೆ ಯಾರಾದರೂ ರಾಜಕೀಯ ದ್ವೇಷದಿಂದ ನನ್ನನ್ನು ತಪ್ಪಿಸಿದ್ದರೆ, ಅದು ಅವರ ರಾಜಕೀಯ ತಪ್ಪು ಹೆಜ್ಜೆ” ಎಂದು ಹೇಳಿಕೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಕಾರ್ಯಕ್ರಮ ತಪ್ಪಲು ಬಿಜೆಪಿ ಅಥವಾ ಪುತ್ತಿಗೆ ಮಠ ಕಾರಣವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

