ಶಿರಸಿ: ಶಿರಸಿಯಲ್ಲಿ ನವೆಂಬರ್ 8 ಮತ್ತು 9ರಂದು ಇನ್ನರ್ ವೀಲ್ ಕ್ಲಬ್ ವತಿಯಿಂದ ಆಯೋಜಿಸಲಾದ ‘ಸಂಪ್ರೀತಿ’ ಕಾರ್ಯಕ್ರಮದಲ್ಲಿ, ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರು ತಯಾರಿಸಿದ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಗಮನ ಸೆಳೆಯಿತು.
ಬೆನ್ನುಹುರಿ ಅಪಘಾತಕ್ಕೊಳಗಾದರೂ ಪುನಶ್ಚೇತನಗೊಂಡ ಈ ದಿವ್ಯಾಂಗರು ತಯಾರಿಸಿದ ಬತ್ತಿಕಟ್ಟು, ಹೂಗಳು, ಉಣ್ಣೆಯ ವಸ್ತುಗಳು, ಗೊಂಬೆಗಳು ಸೇರಿದಂತೆ ಹಲವು ಕೈಗಾರಿಕ ವಸ್ತುಗಳು ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡು ಮಾರಾಟವಾಗಿದವು.
ಈ ವಿಶಿಷ್ಟ ಮಳಿಗೆಯನ್ನು ಸೌಜನ್ಯ ತೆಲಂಗರವರ ನೇತೃತ್ವದಲ್ಲಿ ಹಾಗೂ ಶ್ರೀ ಕೃಷ್ಣರವರ ಸಹಕಾರದೊಂದಿಗೆ ಪ್ರಥಮ ಬಾರಿಗೆ ಆಯೋಜಿಸಲಾಯಿತು.ಜನಸಾಮಾನ್ಯರಿಂದ ಅಪಾರ ಪ್ರೋತ್ಸಾಹ ದೊರೆತಿದ್ದು, ಮಳಿಗೆಯ ಸಂಪೂರ್ಣ ನಿರ್ವಹಣೆಯನ್ನೇ ದಿವ್ಯಾಂಗರೇ ಕೈಗೊಂಡಿರುವುದು ವಿಶೇಷ.
ಕಾರ್ಯಕ್ರಮದ ಕೊನೆಯಲ್ಲಿ ಸುಮಾರು ₹19,000/- ಮೌಲ್ಯದ ವ್ಯಾಪಾರ ನಡೆದಿದ್ದು, ಇದು ದಿವ್ಯಾಂಗರ ಶ್ರಮ, ಕೌಶಲ್ಯ ಮತ್ತು ಆತ್ಮವಿಶ್ವಾಸದ ಸ್ಫೂರ್ತಿದಾಯಕ ನಿದರ್ಶನವಾಗಿದೆ.

