ದಕ್ಷಿಣ ಕನ್ನಡ, ಸೆಪ್ಟೆಂಬರ್ 12: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ‘ಪೋಸ್ಟ್ ಕಾರ್ಡ್’ ಸುದ್ದಿ ಸಂಸ್ಥೆಯ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋ ಬಳಸಿ ಕೋಮು ಪ್ರಚೋದನೆಗೆ ಯತ್ನಿಸಿರುವುದಾಗಿ ಪೊಲೀಸರ ಆರೋಪ. ಸೆಪ್ಟೆಂಬರ್ 9ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಯ ವಿವರಗಳ ಪ್ರಕಾರ, ಹೆಗ್ಡೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಫೋಟೋವನ್ನು ಎಡಿಟ್ ಮಾಡಿ, “ಗಣಪನ ಮೆರವಣಿಗೆಯ ಮೇಲೆ ಕಲ್ಲು ಎಸೆದವರ ಮಸೀದಿಗೆ ಬುಲ್ಡೋಜರ್ ನುಗ್ಗಿಸುವ ಧೈರ್ಯ ಮಾಡಿ ನೋಡಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಾಕಿದ್ದರು.
ಈ ಪೋಸ್ಟ್ ಧರ್ಮಗಳ ನಡುವೆ ದ್ವೇಷ ಉಂಟುಮಾಡುವ ಉದ್ದೇಶ ಹೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ, ಮೂಡಬಿದಿರೆ ಪಿಎಸ್‌ಐ ಕೃಷ್ಣಪ್ಪ ಅವರು ಸುಮೋಟೋ ದೂರು ದಾಖಲಿಸಿಕೊಂಡಿದ್ದಾರೆ.
ಬಂಧಿತ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೋಮವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಘಟನೆ ರಾಜಕೀಯ ವಲಯದಲ್ಲೂ, ಸಾಮಾಜಿಕ ಮಾಧ್ಯಮದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.

