ದುಬೈ: ಏಷ್ಯಾ ಕಪ್ 2025ರ ಗ್ರೂಪ್ ‘ಎ’ಯ ಮೊದಲ ಪಂದ್ಯದಲ್ಲಿ ಭಾರತವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಯುಎಇ ಕೇವಲ 57 ರನ್‌ಗಳಿಗೆ ಆಲೌಟ್ ಆಯಿತು.

ಭಾರತದ ಸ್ಪಿನ್ ಜಾದೂಗಾರ ಕುಲದೀಪ್ ಯಾದವ್ 4 ವಿಕೆಟ್ ಪಡೆದು ಯುಎಇ ಬ್ಯಾಟ್ಸ್‌ಮನ್‌ಗಳ ಬೆನ್ನೆಲುಬೇ ಮುರಿದರು. ಅಲ್ಲದೆ, ಆಲ್‌ರೌಂಡರ್ ಶಿವಂ ದುಬೆ 3 ವಿಕೆಟ್ ಪಡೆದು ಎದುರಾಳಿ ತಂಡವನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿದರು. ಒಂದು ಹಂತದಲ್ಲಿ 26/0ರಲ್ಲಿ ನಿಂತಿದ್ದ ಯುಎಇ, ಕೇವಲ 31 ರನ್‌ಗಳ ಅಂತರದಲ್ಲಿ 10 ವಿಕೆಟ್ ಕಳೆದುಕೊಂಡು 57ಕ್ಕೆ ಆಲೌಟ್ ಆಯಿತು.



ಇದು ಏಷ್ಯಾ ಕಪ್ ಟಿ20 ಇತಿಹಾಸದಲ್ಲಿ ಯುಎಇ ದಾಖಲಿಸಿದ ಅತ್ಯಂತ ಕಡಿಮೆ ಮೊತ್ತ, ಹಾಗೆಯೇ ಟೂರ್ನಿಯ ಇತಿಹಾಸದಲ್ಲೇ ಎರಡನೇ ಅತಿ ಕಡಿಮೆ ಮೊತ್ತ.
58 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ, ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದೆ. 4.3 ಓವರ್‌ಗಳಲ್ಲಿ ಭಾರತ 60/1 ರಲ್ಲಿ ಸುಲಭ ಜಯ ಗಳಿಸಿದೆ. ಶುಭ್ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಸುಲಭವಾಗಿ ಬ್ಯಾಟಿಂಗ್ ನಡೆಸಿ 9 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.
ಗ್ರೂಪ್ ‘ಎ’ಯಲ್ಲಿ ಭಾರತ, ಯುಎಇ ಜೊತೆಗೆ ಒಮಾನ್ ಮತ್ತು ಪಾಕಿಸ್ತಾನ ಕೂಡ ಇದ್ದು, ಮುಂದಿನ ಭಾರತ-ಪಾಕಿಸ್ತಾನ ಮುಖಾಮುಖಿ ಕ್ರಿಕೆಟ್ ಪ್ರೇಮಿಗಳಿಗೆ ಹೆಚ್ಚಿನ ಕುತೂಹಲ ಹುಟ್ಟಿಸಿದೆ.

