ಅರುಣಾಚಲ ಪ್ರದೇಶದಲ್ಲಿ ಮೊದಲ ಬಾರಿಗೆ ಪಲ್ಲಾಸ್ ಬೆಕ್ಕು (Pallas’s Cat) ಕ್ಯಾಮರಾದಲ್ಲಿ ಸೆರೆಯಾಗಿದ್ದು, ಭಾರತದ ವನ್ಯಜೀವಿ ದಾಖಲಾತಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ವಿಶ್ವ ಪ್ರಕೃತಿ ನಿಧಿ (WWF-India) ನಡೆಸಿದ ಎಂಟು ತಿಂಗಳ ಸಮೀಕ್ಷೆಯಲ್ಲಿ ಈ ಅಪರೂಪದ ದೃಶ್ಯ ದೊರೆತಿದೆ.

ಪಶ್ಚಿಮ ಕಮೆಂಗ್ ಮತ್ತು ತವಾಂಗ್ ಜಿಲ್ಲೆಗಳ 2,000 ಚದರ ಕಿಲೋಮೀಟರ್ ಪ್ರದೇಶದಲ್ಲಿ 136 ಕ್ಯಾಮೆರಾ ಟ್ರ್ಯಾಪ್ಗಳನ್ನು ಅಳವಡಿಸಲಾಗಿತ್ತು. ಈ ಸಂದರ್ಭದಲ್ಲಿ ಪಲ್ಲಾಸ್ ಬೆಕ್ಕಿನ ಜೊತೆಗೆ ಹಿಮ ಚಿರತೆ ( snow leopard), ಮೋಡದ ಚಿರತೆ ( clouded leopard), ಮಾರ್ಬಲ್ಡ್ ಬೆಕ್ಕು ( marbled cats) ಹಾಗೂ ಇತರ ಅಪರೂಪದ ಜೀವಿಗಳು 4,200 ಮೀಟರ್ ಎತ್ತರದ ಪ್ರದೇಶದಲ್ಲಿ ದಾಖಲಾಗಿವೆ. ಇದರಿಂದ ಅರುಣಾಚಲ ಪ್ರದೇಶವು ಕಾಡು ಬೆಕ್ಕುಗಳ ಜೀವ ವೈವಿಧ್ಯತೆಯ ಜಾಗತಿಕ ಹಾಟ್ಸ್ಪಾಟ್ ಎಂದು ಮತ್ತೊಮ್ಮೆ ದೃಢಪಟ್ಟಿದೆ.
ಸಾಂದ್ರ ಕೂದಲು, ಚಿಕ್ಕ ಕಾಲು ಹಾಗೂ ದಟ್ಟ ಬಾಲ ಹೊಂದಿರುವ ಪಲ್ಲಾಸ್ ಬೆಕ್ಕು ಅತೀ ಚಳಿಗಾಲದ ಪರಿಸರದಲ್ಲೂ ತನ್ನನ್ನು ಹೊಂದಿಸಿಕೊಳ್ಳುತ್ತದೆ. ಹಗಲುಗಳಲ್ಲಿ ಕಲ್ಲಿನ ಸೀಳಿನಲ್ಲಿ ಅಡಗಿ, ಸಂಜೆ ಬೇಟೆ ನಡೆಸುವ ಈ ಬೆಕ್ಕನ್ನು ಕಾಣುವುದು ಅತೀ ಅಪರೂಪ.

