ಕಾರವಾರ, ಜುಲೈ 11: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣವನ್ನು 24 ಗಂಟೆಯೊಳಗೆ ಸ್ಫೋಟಿಸುತ್ತೇವೆ ಎಂಬ ಉದ್ದೇಶಪೂರಿತ ಬೆದರಿಕೆ ಇ-ಮೇಲ್ ಸಂದೇಶ ಭಟ್ಕಳ ಠಾಣೆಗೆ ಕಳುಹಿಸಲಾಗಿದೆ. ಕನ್ನನ್ ಗುರುಸ್ವಾಮಿ ಎಂಬ ಹೆಸರಿನಲ್ಲಿ ಜುಲೈ 10 ರಂದು ಬೆಳಿಗ್ಗೆ 10:30ರ ಸಮಯದಲ್ಲಿ ಈ ಇ-ಮೇಲ್ kannnannandik@gmail.com ವಿಳಾಸದಿಂದ ಭಟ್ಕಳ ಠಾಣೆಯ ಅಧಿಕೃತ ಇ-ಮೇಲ್ bhatkaltownkwr@ksp.gov.in ಗೆ ಕಳುಹಿಸಲಾಗಿದೆ.

ಆದರೆ, ಇ-ಮೇಲ್ ಸಂದೇಶ ಎರಡು ಬಾರಿ ಬಂದಿದ್ದು, ಮೊದಲಿಗಿನಲ್ಲಿ ‘We will plant bomb in Bhatkal town’ ಮತ್ತು ನಂತರದಲ್ಲಿ ‘All the bombs will blast in 24 hours’ ಎಂಬ ಧಮ್ಕಿಯ ಸಂದೇಶಗಳು ಒಳಗೊಂಡಿದ್ದವು.
ಈ ಕುರಿತಂತೆ ಭಟ್ಕಳ ಠಾಣೆಯ ಪಿಎಸ್‌ಐ ನವೀನ್ ನಾಯ್ಕ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಈ ಬೆದರಿಕೆ ಇ-ಮೇಲ್‌ನ ಬಳಿಕ ಭಟ್ಕಳ ಪೊಲೀಸರು ತಕ್ಷಣ ಅಲರ್ಟ್ ಆಗಿದ್ದು, ಮುಂಜಾಗ್ರತಾ ಕ್ರಮವಾಗಿ ಭಟ್ಕಳ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಜನಸಂದಣಿಯಿರುವ ಪ್ರಮುಖ ಪ್ರದೇಶಗಳಲ್ಲಿ ಶ್ವಾನದಳ ಹಾಗೂ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ತಪಾಸಣೆ ನಡೆಸಲಾಗಿದೆ.
ಜಿಲ್ಲಾಡಳಿತ ಈ ಬಗ್ಗೆ ಹೈ ಅಲರ್ಟ್ ಘೋಷಿಸಿದ್ದು, ಪೊಲೀಸ್ ಇಲಾಖೆ ತನಿಖೆ ಪ್ರಾರಂಭಿಸಿದೆ. ಭದ್ರತೆಯ ದೃಷ್ಟಿಯಿಂದ ಈ ಬೆದರಿಕೆ ಸಂದೇಶದ ಮೂಲವನ್ನು ಪತ್ತೆಹಚ್ಚಲು ಸೈಬರ್ ವಿಭಾಗವೂ ಸಕ್ರಿಯವಾಗಿದೆ. ಸಾರ್ವಜನಿಕರಲ್ಲಿ ಆತಂಕದ ವಾತಾವರಣವಿದ್ದು, ತನಿಖೆಯು ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆಯಿದೆ.