ಪೋಷಣ್ ಟ್ರಾಕರ್ ಆ್ಯಪ್ ಕೈಸೇರಿದ 2024 ರ ಪ್ರಧಾನಮಂತ್ರಿ ಸಾರ್ವಜನಿಕ ಆಡಳಿತ ಪ್ರಶಸ್ತಿ

ಪೋಷಣ್ ಟ್ರಾಕರ್ ಆ್ಯಪ್ ಕೈಸೇರಿದ 2024 ರ ಪ್ರಧಾನಮಂತ್ರಿ ಸಾರ್ವಜನಿಕ ಆಡಳಿತ ಪ್ರಶಸ್ತಿ

ನವದೆಹಲಿ: ಪೋಷಣ್ ಟ್ರಾಕರ್ ಆ್ಯಪ್ಲಿಕೇಶನ್ ಅನ್ನು 2024 ರ ಪ್ರಧಾನಮಂತ್ರಿ ಸಾರ್ವಜನಿಕ ಆಡಳಿತದಲ್ಲಿನ ಶ್ರೇಷ್ಠತೆ ಪ್ರಶಸ್ತಿ (Prime Minister’s Award for Excellence in Public Administration 2024) ಯು ನವೀನತೆ (ಕೇಂದ್ರ) ವಿಭಾಗದಲ್ಲಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು ಏಪ್ರಿಲ್ 21 ರಂದು, ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 17ನೇ ನಾಗರಿಕ ಸೇವಾ ದಿನಾಚರಣೆ (17th Civil Services Day) ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿ ಗೌರವಿಸಿದರು.

ಈ ಪ್ರಶಸ್ತಿ ಕೇಂದ್ರ ಸರ್ಕಾರದ ಇ-ಗವರ್ನನ್ಸ್ ಮತ್ತು ನವೀನ ಪರಿಕಲ್ಪನೆಗಳನ್ನು ಜಾರಿಗೊಳಿಸುವತ್ತ ತೆಗೆದುಕೊಂಡಿರುವ ದೊಡ್ಡ ಹೆಜ್ಜೆಯನ್ನು ಪ್ರತಿಬಿಂಬಿಸುತ್ತದೆ. ಪೋಷಣ್ ಟ್ರಾಕರ್ ಆ್ಯಪ್ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿದ್ದು, ಪೋಷಣ್ ಅಭಿಯಾನ ಯೋಜನೆಯ ಭಾಗವಾಗಿದೆ. ಈ ಆ್ಯಪ್ ಪೋಷಣೆಯ ಅಭಾವವನ್ನು ಕಡಿಮೆ ಮಾಡುವ ಉದ್ದೇಶದಿಂದ ಲಾಭಪಡೆಯುವ ಮಕ್ಕಳ, ಗರ್ಭಿಣಿಯರು ಮತ್ತು ತಾಯಂದಿರ ಮಾಹಿತಿಯನ್ನು ನಿಖರವಾಗಿ ಪತ್ತೆ ಹಚ್ಚಲು ಹಾಗೂ ಸೇವೆಗಳನ್ನು ತಕ್ಷಣ ಒದಗಿಸಲು ಸಹಾಯ ಮಾಡುತ್ತದೆ.

ಅಂಗನವಾಡಿ ಕಾರ್ಯಕರ್ತೆಯರು ಈ ಆ್ಯಪ್ ನ ಮೂಲಕ ಮಕ್ಕಳ ಬೆಳವಣಿಗೆಯ ಪ್ರಮಾಣ, ಸೇವೆಗಳ ವಿತರಣೆ, ಆರೋಗ್ಯ ಮಾಹಿತಿ ಮೊದಲಾದ ಮಾಹಿತಿಯನ್ನು ನೈಜ ಸಮಯದಲ್ಲಿ ದಾಖಲಿಸಬಹುದು. ಡ್ಯಾಶ್ ಬೋರ್ಡ್‌ಗಳ ಮೂಲಕ ಮೇಲ್ವಿಚಾರಣೆ ಸುಲಭವಾಗುವುದರ ಜೊತೆಗೆ, ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಬಹುದು.

ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಅಧಿಕಾರಿಗಳು “ಅಂಗನವಾಡಿ ಕೇಂದ್ರಗಳಲ್ಲಿನ ಕಾರ್ಯಕರ್ತೆಯರ ಪರಿಶ್ರಮ ಮತ್ತು ಡಿಜಿಟಲ್ ತಂತ್ರಜ್ಞಾನದ ಬಳಕೆ ಸಾರ್ವಜನಿಕ ಆರೋಗ್ಯದಲ್ಲಿ ಮಹತ್ವಪೂರ್ಣ ಬದಲಾವಣೆ ತಂದಿದೆ“ಯೆಂದು ಹೇಳಿದರು.

ಪ್ರಧಾನಮಂತ್ರಿ ಸಾರ್ವಜನಿಕ ಆಡಳಿತ ಪ್ರಶಸ್ತಿಗಳನ್ನು ಪ್ರತಿ ವರ್ಷ ಏಪ್ರಿಲ್ 21 ರಂದು ಆಚರಿಸಲಾಗುವ ನಾಗರಿಕ ಸೇವಾ ದಿನದಂದು ನೀಡಲಾಗುತ್ತದೆ. ಉತ್ತಮ ಆಡಳಿತ, ನವೀನತೆ, ಜನಪರ ಸೇವೆಗಳ ಪರಿಣಾಮಕಾರಿತ್ವಕ್ಕೆ ಉತ್ತೇಜನ ನೀಡುವುದು ಈ ಪ್ರಶಸ್ತಿಯ ಉದ್ದೇಶ.

ರಾಷ್ಟ್ರೀಯ