
ನವದೆಹಲಿ : ಮಂಗಳೂರಿನ ವೆನ್ಲಾಕ್ ಸೇರಿ ದೇಶದೆಲ್ಲೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎದುರಾಗಿರುವ ನರ್ಸ್ ಗಳ ಕೊರತೆ ನೀಗಿಸಲು ಎಂಬಿಬಿಎಸ್ ಮಾದರಿ ನರ್ಸ್ಗಳಿಗೂ ಇಂಟರ್ನ್ ಶಿಪ್ ಕಡ್ಡಾಯಗೊಳಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಸಂಸತ್ತಿನಲ್ಲಿ ಸದನದ ಗಮನ ಸೆಳೆದಿದ್ದಾರೆ.


ಲೋಕಸಭೆಯಲ್ಲಿ ನಿಯಮ 377ರಡಿ ಈ ವಿಷಯ ಉಲ್ಲೇಖಿಸಿದ ಕ್ಯಾ. ಚೌಟ ಅವರು, 905 ಹಾಸಿಗೆಗಳ ವೆನ್ಲಾಕ್ ಆಸ್ಪತ್ರೆಯಲ್ಲಿ ದಾದಿಯರ ಕೊರತೆ ಕಾಡುತ್ತಿದೆ. ಸರ್ಕಾರಿ ಮಾರ್ಗಸೂಚಿ ಪ್ರಕಾರ ಇಲ್ಲಿ 483 ನರ್ಸಿಂಗ್ ಸಿಬ್ಬಂದಿ ಅಗತ್ಯವಿದ್ದು, ಪ್ರಸ್ತುತ ಕೇವಲ 265 ಶುಶ್ರೂಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ.
ವೆನ್ಲಾಕ್ನಲ್ಲಿ ನುರಿತ, ಅನುಭವಿ ವೈದ್ಯರ ತಂಡ ಕಾರ್ಯನಿರ್ವಹಿಸುತ್ತಿದ್ದರೂ ನರ್ಸ್ ಗಳ ಕೊರತೆಯಿಂದಾಗಿ ರೋಗಿಗಳಿಗೆ ಪೂರ್ಣ ಪ್ರಮಾಣದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಹಿನ್ನಡೆಯಾಗುತ್ತಿದೆ ಎಂದು ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಗಮನಕ್ಕೆ ತಂದಿದ್ದಾರೆ.