ಶಂಖವನ್ನು ಊದೋಣ

ಶಂಖವನ್ನು ಊದೋಣ

ಶಂಖ

ಭಾರತೀಯರಾದ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ, ನೆರೆಹೊರೆಯವರಲ್ಲಿ ಅಥವಾ ಬಂಧು ಮಿತ್ರರ ಮನೆಗಳಲ್ಲಿ ಶಂಖವನ್ನು ಊದುವುದನ್ನು ನೋಡಿರುತ್ತೇವೆ ಅಥವಾ ಅದರ ನಾದವನ್ನಂತೂ ಕೇಳಿರುತ್ತೇವೆ. ಹಬ್ಬ ಹರಿದಿನಗಳಲ್ಲಿ, ದೇವಾಲಯಗಳಲ್ಲಿ ಶಂಖವನ್ನು ಅಗಾಗ್ಗೆ ಊದುತ್ತಿರುತ್ತೇವೆ.  ಶಂಖ ಪ್ರಕೃತಿಯ ಒಂದು ಅದ್ಭುತ ಕಲಾಕೃತಿ.  ಇದು ಟರ್ಬಿನಲ್ಲಿಡೆ ಎಂಬ ಜಾತಿಗೆ ಸೇರಿದ ಟರ್ಬಿನೆಲ್ಲಾ ಪೈರಮ್ ಎಂಬ ಕಡಲ ಶಂಬುಕ ಅಥವಾ ಬಸವನ ಹುಳುವಿನ ಚಿಪ್ಪು. ಈ ಜಾತಿಯ ಬಸವನ ಹುಳು ಸಾಮಾನ್ಯವಾಗಿ ಹಿಂದೂ ಮಹಾಸಾಗರದಲ್ಲಿ ಕಾಣಸಿಗುತ್ತದೆ. 

ಜೀವಂತ ಟರ್ಬಿನೆಲ್ಲಾ ಪೈರಮ್

ನಮ್ಮ ಹಿಂದೂ ಮಿತ್ರರು ಇದನ್ನು ತಮ್ಮ ತಮ್ಮ ಆರಾಧ್ಯ ದೈವಗಳ ಕೈಯಲ್ಲಿನ ಸಾಧನವೆಂದು ಪೂಜನೀಯವಾಗಿ ಕಾಣುತ್ತಾರೆ. ಶಂಖವು ಪ್ರಕೃತಿಯಲ್ಲಿನ ಅನೇಕ ಹಾನಿಕಾರಕ ಅಂಶಗಳನ್ನು ನಾಶಮಾಡಿ, ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂಬ ನಂಬಿಕೆ ಹಿಂದೂಗಳದ್ದು. ಅದು ಅವರವರ ಭಾವಕ್ಕೆ ಮತ್ತು ಅವರವರ ಭಕುತಿಗೆ ಸಂಬಂಧಿಸಿದ್ದು. ಶಂಖವನ್ನು ಕೇವಲ ಆಚರಣೆ ಎಂದಷ್ಟೇ ನೋಡದೇ, ಅದರ ಹಿಂದಿನ ವೈಜ್ಞಾನಿಕ ಲಾಭವನ್ನು ಹುಡುಕುತ್ತಾ ಹೋದರೆ, ಅದು ಒಂದು ಮಿನಿ ಡಾಕ್ಟರೇ ಸರಿ. ಯಾಕಂತೀರಾ ಬನ್ನಿ ಹೇಳುತ್ತೀನಿ.

  • ಶಂಖವನ್ನು ಊದುವುದರಿಂದ ಮೂತ್ರನಾಳ, ಮೂತ್ರಕೋಶ, ಕೆಳ ಹೊಟ್ಟೆ, ವಫೆ (ಡಯಾಫ್ರಮ್), ಎದೆ ಮತ್ತು ಕತ್ತಿನ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ದೊರೆಯುತ್ತದೆ.
  • ನಮ್ಮ ಗುದನಾಳದ ಸ್ನಾಯುಗಳಿಗೆ ವ್ಯಾಯಾಮವನ್ನು ನೀಡುತ್ತದೆ.
  • ನಾವು ಶಂಖವನ್ನು ಊದಿದಾಗ, ನಮ್ಮ ಶ್ವಾಸಕೋಶದ ಸ್ನಾಯುಗಳು ಹಿಗ್ಗಿ, ಅವುಗಳ ಉಸಿರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
  • ನಿಮ್ಮ ಥೈರಾಯ್ಡ್ ಗ್ರಂಥಿಗಳು ಮತ್ತು ಧ್ವನಿ ಸಂಬಂಧಿತ ನಾಳಗಳು ಸಕ್ರಿಯವಾಗಿ, ಮಾತನಾಡುವುದಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಬಾಯೊಳಗೆ ಗಾಳಿ ತುಂಬಿಕೊಂಡು, ಶಂಖವನ್ನು ಊದುವುದರಿಂದ, ನಮ್ಮ ಮುಖದ ಮೇಲಿನ ಸುಕ್ಕುಗಳು ಮಾಯವಾಗುತ್ತವೆ. ಆದರೆ ಇವತ್ತಿನ ಈ ತಂತ್ರಜ್ಞಾನ ಯುಗದಲ್ಲಿನ, ನಾವು ಈ ಗೆರೆಗಳು ಅಥವಾ ಫೈನ್‌ಲೈನ್‌ಗಳನ್ನು ತೆಗೆಯಲು ಅದೆಷ್ಟು ಕ್ರೀಮ್‌ಗಳನ್ನು ಹಚ್ಚುತ್ತೇವೋ ನಮಗೇ ತಿಳಿಯದು. ನಿಜವಾದ ಸಮೃದ್ಧಿ ಎಂದರೆ ಮಾನಸಿಕ ಶಾಂತಿ, ಆರೋಗ್ಯ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಎನ್ನುವುದನ್ನು ಸಮುದ್ರದಾಳದ ಚಿಪ್ಪು ಕೂಗಿ ಕೂಗಿ ಹೇಳುತ್ತದೆ.

ಹಾಗಾದರೆ, ಈ ಶಂಖವನ್ನು ಮನಸೋ ಇಚ್ಛೆ ಊದಬಹುದೇ? ಅಥವಾ ಅದಕ್ಕೆ ಯಾವುದಾದರೂ ಸರಿಯಾದ ರೀತಿ ಇದೆಯೇ?

  • ಹೌದು. ಸಾಮಾನ್ಯವಾಗಿ ನಾವು ಶಂಖವನ್ನು ಊದುವಾಗ, ಬಾಯಿಯಿಂದ ಉಸಿರನ್ನು ಒಳಗೆ ತೆಗೆದುಕೊಳ್ಳುತ್ತೇವೆ. ಆದರೆ, ನಾವು ಶಂಖವನ್ನು ಊದುವಾಗ, ಮೂಗಿನಿಂದ ಉಸಿರನ್ನು ಒಳ ತೆಗೆದುಕೊಳ್ಳಬೇಕು.
  • ನೀವು ಶಂಖವನ್ನು ಊದುತ್ತಿರುವುದು ಇದೇ ಮೊದಲ ಬಾರಿಯಾದರೆ, ದಯವಿಟ್ಟು ಹಿರಿಯರ, ತಿಳಿದವರ ಮಾರ್ಗದರ್ಶನದಲ್ಲಿ ಊದಿರಿ. ಇಲ್ಲದಿದ್ದಲ್ಲಿ ಕಿವಿ, ಮೂಗು ಮತ್ತು ಮುಖದ ಮೃದು ಸ್ನಾಯುಗಳು ತೊಂದರೆಗೊಳಗಾಗಬಹುದು.
  • ನೀವು ಅಧಿಕ ರಕ್ತದೊತ್ತಡ, ಹರ್ನಿಯಾ, ಗ್ಲುಕೋಮಾ ಮುಂತಾದ ತೊಂದರೆಗಳಿಂದ ಬಳಲುತ್ತಿದ್ದರೆ, ಶಂಖವನ್ನು ಊದುವುದು ಒಳ್ಳೆಯದಲ್ಲ.
ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಊದುವುದಕ್ಕೆ ನೀಡುವ ಸ್ಪೈರೋಮೀಟರ್

ಇವತ್ತು ನ್ಯುಮೋನಿಯಾ, ಅಸ್ತಮಾ ಮುಂತಾದ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಆಸ್ಪತ್ರೆಗಳಿಗೆ ಹೋದರೆ, ಅಲ್ಲಿನ ವೈದ್ಯರು ಬಲೂನ್ ಅಥವಾ ಸ್ಪೈರೋಮೀಟರ್ ಬಳಸಿ ಗಾಳಿಯನ್ನು ಊದಬೇಕೆಂದು ಸಲಹೆ ಕೊಡುತ್ತಾರೆ.  ಆದರೆ, ದೇವರ ಭಯ-ಭಕ್ತಿಯ ರೂಪದಲ್ಲಿ ವಿಜ್ಞಾನವನ್ನು ಅನುಸರಿಸಿದ ನಮ್ಮ ಹಿರಿಯರು, ಅದನ್ನು ತಂದು ದೇವರ ಕೋಣೆಯಲ್ಲಿಟ್ಟಿದ್ದಾರೆ. ಹಾಗಾದರೆ ಇನ್ನೇಕೆ ತಡ ಬನ್ನಿ, ಪ್ರತಿ ಸಂಜೆ ಮೂರು ಬಾರಿ ಶಂಖವನ್ನು ಊದೋಣ, ರೋಗಮುಕ್ತ ಜೀವನದತ್ತ ಮೊದಲ ಹೆಜ್ಜೆ ಇಡೋಣ.

ಆಧ್ಯಾತ್ಮ