
ಹಳ್ಳಿಯಲ್ಲಿ ಹುಟ್ಟಿದ ಕಿಡಿ ರಾಷ್ಟ್ರಮಟ್ಟದಲ್ಲಿ ಮಿಂಚಬಹುದು ಎಂಬುದಕ್ಕೆ ಆನಂದ ಮಾಸ್ತರ್ ರನ್ನು ಉದಾಹರಣೆಯಾಗಿ ತೆಗೆದುಕೊಂಡರೆ ತಪ್ಪಾಗಲಾರದು. ಯಡೂರು ಗ್ರಾಮದಲ್ಲಿ 1964 ರಲ್ಲಿ ಜನಿಸಿದ ಹಳ್ಳಿಯ ಯುವಕ ತನ್ನ ಕ್ರೀಡಾ ಸಾಧನೆಯಿಂದಲೇ ರಾಷ್ಟ್ರಮಟ್ಟದ ಕಬಡ್ಡಿ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ಗಿಟ್ಟಿಸಿಕೊಳ್ಳುವುದೆಂದರೇ ದೊಡ್ಡ ಸಾಧನೆ.


ಸೋಮವಾರಪೇಟೆ ಸಮೀಪದ ಯಡೂರು ಗ್ರಾಮದ ಆನಂದರವರು. ವಿದ್ಯಾರ್ಥಿ ಜೀವನದಿಂದಲೇ ಕ್ರೀಡೆಯತ್ತ ಆಸಕ್ತಿ ತೋರಿದ ವ್ಯಕ್ತಿ.ಯಡೂರು ಗ್ರಾಮದ ಆಸೆಗೋಧಿ ಮಾದಪ್ಪ ಹಾಗೂ ಪೊನ್ನಮ್ಮ ರೈತ ದಂಪತಿಯ ಪುತ್ರರಾದ ಆನಂದ, ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಯಡೂರು ಸಹಿಪ್ರಾ ಶಾಲೆಯಲ್ಲಿ, ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದು ಯಡೂರು ಬಿಟಿಸಿಜಿ ಕಾಲೇಜಿನಲ್ಲಿ ಪದವಿ ಪೂರೈಸಿದ ಬಳಿಕ, ಹಾಸನದಲ್ಲಿ ದೈಹಿಕ ಶಿಕ್ಷಣ ತರಬೇತಿ ಪಡೆದು ಗರ್ವಾಲೆ ಪಾಂಡಂಡ ಸುಬ್ಬಮ್ಮ ನಂಜಮ್ಮ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಇವರು,

ನಂತರದ ದಿನಗಳಲ್ಲಿ ಕ್ರೀಡಾ ಶಿಕ್ಷಕರಾಗಿ ಜೀವನ ಆರಂಭಿಸಿದವರು. ಇದರ ಜೊತೆಯಲ್ಲೇ ನೂರಾರು ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಪಡೆದವರು. ಕ್ರೀಡಾಜೀವನದಲ್ಲಿ ಸ್ಥಳೀಯ ಕ್ರೀಡಾಕೂಟಗಳಿಂದ ಹಿಡಿದು ರಾಜ್ಯ, ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಗಳಿಗೆ ತೀರ್ಪುಗಾರರಾಗಿಯೂ ಗಮನ ಸೆಳೆದವರು.ಗರ್ವಾಲೆ ಪಾಂಡಂಡ ಸುಬ್ಬಮ್ಮ ನಂಜಮ್ಮ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಇವರು, ನಂತರ ಪೆರಾಜೆಯ, ಸ.ಮಾ.ಪ್ರಾ. ಶಾಲೆ, ಕೂಡಿಗೆ ಸರ್ಕಾರಿ ಶಾಲೆ, ಕೊಡಗುಜಿಲ್ಲಾ ಶಿಕ್ಷಕ ಶಿಕ್ಷಣ ತರಬೇತಿ ಕೇಂದ್ರ, ಬೆಟ್ಟದಳ್ಳಿ ಸ.ಹಿ.ಪ್ರಾ. ಶಾಲೆಯಲ್ಲಿಸೇವೆ ಸಲ್ಲಿಸಿ, ಪ್ರಸ್ತುತ ಚೌಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ-ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮೇ 31 ರಂದು ಸುದೀರ್ಘ ಸೇವೆಯ ಬಳಿಕ ನಿವೃತಿಯಾದರು.

ಉದಯ ಯುವಕ ಸಂಘದ ಅಧ್ಯಕ್ಷರಾಗಿ ಕಬಡ್ಡಿ ತಂಡದ ನಾಯಕನಾಗಿ ಸುಮಾರು 70 ಕ್ಕೂ ಅಧಿಕ ಪಾರಿತೋಷಕ ಗಳನ್ನು ತಮ್ಮ ತಂಡಕ್ಕೆ ತರಲು ಪ್ರಮುಖ ಕಾರಣಕರ್ತರು.
ಅತ್ಯುತ್ತಮ ಕಬಡ್ಡಿ ಆಟಗಾರನಾಗಿ ಹಲವಷ್ಟು ವೈಯಕ್ತಿಕ ಪ್ರಶಸ್ತಿಗಳನ್ನು ಬಗಲಿಗೇರಿಸಿಕೊಂಡ ಭಗೀರಥ . ವಿದ್ಯಾರ್ಥಿ ದಿಸೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಮ್ಯಾರಥಾನ್ ಹಾಗೂ ಕಬಡ್ಡಿಯಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪೆರಾಜೆ, ಕೂಡಿಗೆ, ಬೆಟ್ಟದಳ್ಳಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭ ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಕ್ರೀಡಾಕ್ಷೇತ್ರದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಪೆರಾಜೆ ಶಾಲಾ ತಂಡ ಕಬಡ್ಡಿ ಕ್ರೀಡೆಯಲ್ಲಿ 3 ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವಲ್ಲಿ ಇವರ ಪಾತ್ರ ಹಿರಿದು. ಇದೇ ತಂಡ 2 ಬಾರಿ ವಿಭಾಗ ಮಟ್ಟಕ್ಕೂ ಆಯ್ಕೆಯಾಗಿದೆ. 2007ರಲ್ಲಿ ಇದೇ ಶಾಲೆಯ ವಿದ್ಯಾರ್ಥಿನಿ ವನಿತ ಎಂಬಾಕೆ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಭಾಗವಹಿಸುವ ಮೂಲಕ ಶಾಲೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಆನಂದ ಅವರಿಗೆ ಕೀರ್ತಿ ತಂದಿದ್ದಾಳೆ. 1996ರಲ್ಲಿ ಪೆರಾಜೆ ಶಾಲೆಯ ಕೆ.ಆರ್. ಲಲಿತ ಎಂಬ ವಿದ್ಯಾರ್ಥಿನಿ 800 ಮೀಟರ್ ಓಟದಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ, ಬೆಂಗಳೂರು ಹೊಸಕೋಟೆಯಲ್ಲಿ ಆಯೋಜನೆಗೊಂಡಿದ್ದ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಳು. ಕೊಡಗು ತಂಡದೊಂದಿಗೆ ಹೊಸಕೋಟೆಗೆ ತೆರಳಿದ್ದ ಲಲಿತ, ರಸ್ತೆ ದಾಟುವಾಗ ಎದುರಾದ ಅಪಘಾತದಲ್ಲಿ ಮೃತಪಟ್ಟ ಸಂದರ್ಭ, ಆನಂದ ಅವರು ಇನ್ನಿಲ್ಲದಂತೆ ಕುಗ್ಗಿಹೋಗಿದ್ದರು. ನಂತರ ಪೆರಾಜೆ ಗ್ರಾಮಸ್ಥರು, ಸಾರ್ವಜನಿಕರು, ಸಂಘ ಸಂಸ್ಥೆ, ಶಿಕ್ಷಣ
ಇಲಾಖೆ, ಮಕ್ಕಳ ಕಲ್ಯಾಣ ನಿಧಿ, ಜಿಲ್ಲಾ ಪಂಚಾಯತ್‌ನಿಂದ ಸುಮಾರು3.80 ಲಕ್ಷ ಹಣವನ್ನು ಸಂಗ್ರಹಿಸಿ ವಿದ್ಯಾರ್ಥಿನಿಯ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಇಷ್ಟೇ ಅಲ್ಲದೆ ಕೆ. ಆರ್. ಲಲಿತ ಹೆಸರನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಪೆರಾಜೆ ಎಎಸ್‌ಎಸ್‌ಎನ್ ಬ್ಯಾಂಕ್‌ನಲ್ಲಿ ಆಕೆಯ ಹೆಸರಿನಲ್ಲಿ 30 ಸಾವಿರ ಮೌಲ್ಯದ ದತ್ತಿ ನಿಧಿ ಸ್ಥಾಪಿಸಿ, ಇದರಲ್ಲಿ ಬರುವ ಹಣದಿಂದ ಪ್ರತಿ ವರ್ಷ ಶಾಲೆಯಲ್ಲಿ ಕ್ರೀಡಾಕೂಟ ಆಯೋಜಿಸಿ,ವಿಜೇತರಿಗೆ ಬಹುಮಾನ ವಿತರಿಸಲಾಗುತ್ತಿದೆ. ಅಂತೆಯೇ ಕ್ರೀಡಾ ಸಾಮಗ್ರಿಗಳನ್ನು ಖರೀದಿ ಮಾಡಲಾಗುತ್ತಿದೆ. ಈ ಕಾರ್ಯದಲ್ಲಿ ಆನಂದ ಅವರ ಪಾತ್ರ ಪ್ರಮುಖವಾಗಿದೆ.
ಕಳೆದ 10 ವರ್ಷದಿಂದ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿತೀರ್ಪುಗಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಆನಂದ ಅವರು, ಆಲ್ ಇಂಡಿಯಾ ಕಬಡ್ಡಿ ಟೂರ್ನಿ, ವಿಶ್ವವಿದ್ಯಾಲಯ ಮಟ್ಟದ ಪಂದ್ಯಾಟ, ಸ್ಥಳೀಯವಾಗಿ ನಡೆಯುವ ಕಬಡ್ಡಿ ಪಂದ್ಯಾವಳಿ, ಕೊಡಗು ಜಿಲ್ಲಾ ಪ್ರೋ ಕಬಡ್ಡಿ ಪಂದ್ಯಾಟ, ಭದ್ರಾವತಿ, ಸುಳ್ಯ, ಉಡುಪಿ, ಶಿವಮೊಗ್ಗ,ಮೈಸೂರು ಜಿಲ್ಲೆಗಳಲ್ಲಿ ಆಯೋಜನೆಗೊಂಡಿದ್ದ ರಾಷ್ಟ್ರಮಟ್ಟದ ಪಂದ್ಯಾಟಕ್ಕೆ
ತೀರ್ಪುಗಾರರಾಗಿ ಭಾಗವಹಿಸಿ ತಮ್ಮ ತೀರ್ಪುಗಳಿಂದ ಮೆಚ್ಚುಗೆ ಗಳಿಸಿದ್ದಾರೆ.ಇವರ ಸೇವೆ ಮತ್ತು ಕ್ರೀಡಾ ಕ್ಷೇತ್ರದ ಸಾಧನೆಗಳಿಗೆ ಅನೇಕ ಪ್ರಶಸ್ತಿ,ಸನ್ಮಾನಗಳಿಗೂ ಭಾಜನರಾಗಿದ್ದಾರೆ. ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ- ಇಲಾಖೆಯಿಂದ ನೀಡುವ ಜಿಲ್ಲಾ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹತ್ತಾರು- ಸಂಘ ಸಂಸ್ಥೆಗಳಿಂದ ಸನ್ಮಾನ, ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಇವರ ನಿವೃತ್ತ ಜೀವನದಲ್ಲೂ ಕಬಡ್ಡಿಕ್ರೀಡೆ ಯಲ್ಲಿನ ಸೇವೆ ಮುಂದುವರೆಯಲಿ ಎಂದು ಆಶಿಸೋಣ.

