ಜೂನ್ 6 ಅಥವಾ 7ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ-ಕರಾವಳಿಯಲ್ಲಿ 5 ದಿನ ಭಾರೀ‌ ಮಳೆ.ಉ

ಜೂನ್ 6 ಅಥವಾ 7ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ-ಕರಾವಳಿಯಲ್ಲಿ 5 ದಿನ ಭಾರೀ‌ ಮಳೆ.

.

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಮುಂಗಾರು ಮಾರುತಗಳು ಬೀಸುತ್ತಿರುವ ಪರಿಣಾಮ ಮುಂದಿನ ಐದು ದಿನಗಳ ಕಾಲ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಜೂನ್ 6 ಅಥವಾ 7ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸದ್ಯ ಮುಂಗಾರು ಮಾರುತಗಳು ಅರಬ್ಬೀ ಸಮುದ್ರದ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪದ ಬಳಿ ಬೀಸುತ್ತಿವೆ. ಹೀಗಾಗಿ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಮುಂದುವರಿದಿದೆ. ಕೇರಳಕ್ಕೆ ಈ ಮಾರುತಗಳು ಮೇ 28 ರಂದು ಪ್ರವೇಶಿಸುವ ಸಾಧ್ಯತೆಯಿದ್ದು, ಕರ್ನಾಟಕದ ಕರಾವಳಿಗೆ ಜೂನ್ 6 ಅಥವಾ 7ರಂದು ಅಪ್ಪಳಿಸಲಿವೆ. ರೆಮಾಲ್ ಚಂಡಮಾರುತ ರಾಜ್ಯಕ್ಕೆ ಅಪ್ಪಳಿಸುವುದಿಲ್ಲ ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ ರಾಜುವೇಲ್ ಮಾಣಿಕ್ಕಂ ತಿಳಿಸಿದ್ದಾರೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಈಗಾಗಲೇ ಪೂರ್ವ ಮುಂಗಾರು ಮಳೆ ಆರಂಭವಾಗಿದೆ.

ಐದು ದಿನಗಳ ಕಾಲ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ‌ ಕನ್ನಡ, ದಕ್ಷಿಣ ಕನ್ನಡಗಳಲ್ಲಿ ಭಾರೀ‌ ಮಳೆಯಾಗಲಿದೆ. ಅಲ್ಲದೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ಹೇಳಿದೆ.ಬೆಂಗಳೂರು ನಗರ ಮತ್ತು ಸುತ್ತಮುತ್ತ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಲಘು ಮಳೆಯಾಗುವ ಸಾಧ್ಯತೆ ಇದೆ

ರಾಜ್ಯ