
ಕಡಬ : ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ಕುಮಾಧಾರ ನದಿಗೆ ನಿರ್ಮಾಣವಾಗಿರುವ ಬೃಹತ್ ಕಿಂಡಿ ಅಣೆಕಟ್ಟೆಯ ಗೇಟುಗಳನ್ನು ಕಿಡಿಗೇಡಿಗಳು ತೆಗೆದು ಅಣೆಕಟ್ಟಿನ ನೀರನ್ನು ಖಾಲಿ ಮಾಡಿದ ಘಟನೆ ನಡೆದಿದೆ.


ಇದೀಗ ಸ್ಥಳಕ್ಕೆ ಆಗಮಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಅಲ್ಲದೆ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ.ಅಣೆಕಟ್ಟೆಯಲ್ಲಿನ ಗೇಟುಗಳಲ್ಲಿ ಅಳವಡಿಸಲಾಗಿದ್ದ ಹಲಗೆಗಳನ್ನು ಯಾರೋ ಕಿಡಿಗೇಡಿಗಳು ತೆಗೆದುದರಿಂದ ಭಾರೀ ಪ್ರಮಾಣದಲ್ಲಿ ಶೇಖರಣೆಯಾಗಿದ್ದ ನೀರು ಒಮ್ಮಿಂದೊಮ್ಮೆಲೇ ಖಾಲಿಯಾದಾಗ ಸ್ಥಳೀಯ ರೈತರು ಅಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ್ದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಮಂಗಳೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯ ಶೆಟ್ಟಿ, ಸಹಾಯಕ ಇಂಜಿನಿಯರ್ ಶಿವಪ್ರಸನ್ನ ಡಿ.ಎಂ ಹಾಗೂ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ವರದಿ ಸಲ್ಲಿಸಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಜಂಟಿಯಾಗಿ ಸ್ಥಳ ಪರಿವೀಕ್ಷಣೆ ನಡೆಸಿರುವ ಅಧಿಕಾರಿಗಳು ಕಿಂಡಿ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹಿಸಲು ಅಳವಡಿಸಲಾಗಿದ್ದ ಎಮ್.ಎಸ್ ಗೇಟ್ಗಳ ರಬ್ಬರ್ ಬೀಡಿಂಗ್ಗಳನ್ನು ತೆಗೆದು ಗೇಟ್ನ್ನು ಮೇಲೆತ್ತಿ ಸಂಗ್ರಹವಾಗಿರುವ ನೀರನ್ನು ಹರಿಯಬಿಟ್ಟಿರುವುದು ಕಂಡು ಬಂದಿರುತ್ತವೆ. ಸಾರ್ವಜನಿಕರನ್ನು ವಿಚಾರಿಸಿದಾಗ ಇಲ್ಲಿ ನಡೆಯುವ ಮರಳುಗಾರಿಕೆಗೆ ಅನುಕೂಲವಾಗಲು ಯಾರೋ ಕಿಡಿಗೇಡಿಗಳು ಸಂಗ್ರಹವಾಗಿರುವ ನೀರನ್ನು ಬರಿದು ಮಾಡಿರುವುದು ಕಂಡು ಬಂದಿರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
