
ಮಂಗಳೂರು :ಶುಕ್ರವಾರ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಿಂದ ಬೃಹತ್ ಕಾಳಿಂಗ ಸರ್ಪ ತಪ್ಪಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸಿಬ್ಬಂದಿಗಳು ಈ ವಿಷಪೂರಿತ ಹಾವನ್ನು ಸುರಕ್ಷಿತವಾಗಿ ಉದ್ಯಾನವನಕ್ಕೆ ಮರಳಿ ಸೇರಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಆದರೇ ಈ ಘಟನೆ ಕೆಲ ಗಂಟೆಗಳ ಕಾಲ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಯಿತು. ಶುಕ್ರವಾರ ಮುಂಜಾನೆ ಜೈವಿಕ ಉದ್ಯಾನವನದ ಟಿಕೆಟ್ ಕೌಂಟರ್ ಬಳಿ ಕಾಳಿಂಗ ಸರ್ಪ ಕಾಣಿಸಿದೆ.

ಗುರುವಾರ ರಾತ್ರಿ ಬ್ರೀಡಿಂಗ್ ವೇಳೆ ಹೆಣ್ಣು ಕಾಳಿಂಗ ಸರ್ಪ, ಬಲೆಯಿಂದ ತಪ್ಪಿಸಿಕೊಂಡಿದೆ ಎನ್ನಲಾಗಿದೆ. ಟಿಕೆಟ್ ಕೌಂಟರ್ ಬಳಿ ಸರ್ಪವನ್ನು ನೋಡಿದ ಸ್ಥಳೀಯರು ಹೌಹಾರಿದ್ದಾರೆ. ಬಳಿಕ ಅದು ರಸ್ತೆ ದಾಟಿ ವಿಜ್ಞಾನ ಕೇಂದ್ರದತ್ತ ಸಾಗಿದೆ.ಈ ಬಗ್ಗೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಳಿಂಗ ಸರ್ಪ ತಪ್ಪಿಸಿಕೊಳ್ಳಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ್ದಾರೆ. ವಿಷಪೂರಿತ ಹಾವು ಕಾಳಿಂಗ ಸರ್ಪವಾಗಿರುವುದರಿಂದ ಸ್ಥಳದಲ್ಲಿ ಸೇರಿದ ಮಂದಿ ಆತಂಕಗೊಂಡಿದ್ದರು. ಸುಮಾರು 7 ಅಡಿಗಿಂತಲೂ ಅಧಿಕ ಗಾತ್ರದ ಕಾಳಿಂಗವೆಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. , ಬಳಿಕ ಕಾಳಿಂಗ ಸರ್ಪ ಹಿಡಿಯುವಲ್ಲಿ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಬಿಸಿಲ ಧಗೆಯಿಂದ ಪಿಲಿಕುಳ ಜೈವಿಕ ಉದ್ಯಾನವನದ ಜೀವಿಗಳು ಇರಲಾಗದೆ ಶಕ್ತಿಮೀರಿ ಹೊರಬರಲು ಪ್ರಯತ್ನಿಸುತ್ತಿದೆ, ಕೆಲವೆಡೆ ಸಮರ್ಪಕ ಭದ್ರತಾ ವ್ಯವಸ್ಥೆಗಳಿಲ್ಲದ ಕಾರಣ ಜೀವಿಗಳು ಕಣ್ಣಪ್ಪಿಸಿ ಹೊರಬರುತ್ತಿದೆ ಎಂಬ ಆರೋಪವೂ ಇದೆ.ಗುರುವಾರ ರಾತ್ರಿ ಬ್ರೀಡಿಂಗ್ ವೇಳೆ ಹೆಣ್ಣು ಕಾಳಿಂಗ ಸರ್ಪ, ಬಲೆಯ ನಡುವೆ ತಪ್ಪಿಸಿಕೊಂಡಿದ್ದು ಶುಕ್ರವಾರ ಸಿಬ್ಬಂದಿ ಅದನ್ನು ಪತ್ತೆ ಮಾಡಿ ಮೃಗಾಲಯಕ್ಕೆ ವಾಪಸ್ ಕಳುಹಿಸಿದ್ದಾರೆ. ಶುಕ್ರವಾರ ಪ್ರವಾಸಿಗರು ಆಗಮಿಸುವುದಕ್ಕೂ ಮುನ್ನ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜೈವಿಕ ಉದ್ಯಾನವನದ ಅಧಿಕಾರಿಗಳು ಸ್ಪಷ್ಪಪಡಿಸಿದ್ದಾರೆ.
ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಸಮಯ
ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಕೇಂದ್ರ ಎಂಬ ಮನ್ನಣೆಗೆ ಪಾತ್ರವಾಗಿರುವ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಸಂತಾನಾಭಿವೃದ್ಧಿಗೆ ಪೂರಕ ವಾತವರಣ, ಆರೈಕಾ ವ್ಯವಸ್ಥೆಯಿದ್ದು, ಇಲ್ಲಿ ಅವುಗಳಿಗೆ ಕಾಡಿನಲ್ಲಿ ಇರುವ ವಾತವರಣ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಸಮಯವಾಗಿದ್ದರಿಂದ ಸರ್ಪಗಳು ಸೂಕ್ತ ಸಂಗಾತಿಯ ಹುಡುಕಾಟದಲ್ಲಿರುತ್ತದೆ. ಇದೇ ಕಾರಣದಿಂದ ಶುಕ್ರವಾರ ಕಾಳಿಂಗ ಸರ್ಪವು ತಪ್ಪಿಸಿಕೊಂಡು ಹೊರಬಂದಿದೆ ಎಂದು ಪಿಲಿಕುಳ ಅಧಿಕಾರಿಗಳು ತಿಳಿಸಿದ್ದಾರೆ. ಸಂತಾನೋತ್ಪತ್ತಿ ಸಮಯವಾಗಿದ್ದರಿಂದ ಕಾಳಿಂಗ ಸರ್ಪವು ಪಿಲಿಕುಳದ ಜೈವಿಕ ಉದ್ಯಾನವನದಿಂದ ಹೊರಬಂದ ವಿಚಾರ ತಿಳಿಯಿತು. ತಕ್ಷಣದಲ್ಲಿ ಅದನ್ನು ಹಿಡಿದು ಸಂರಕ್ಷಣೆ ಮಾಡಲಾಗಿದೆ. ಸೂಕ್ತ ತಪಾಸಣೆ ಮಾಡಿ ಜೈವಿಕ ಉದ್ಯಾನದದಲ್ಲಿರಿಸಲಾಗಿದೆ. ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಾಳಿಂಗ ಸರ್ಪದ ಸಂತಾನೋತ್ಪತ್ತಿಗೆ ಪೂರಕವಾದ ವ್ಯವಸ್ಥೆ ಇದೆ. ಈಗಾಗಲೇ 180 ಸರ್ಪದ ಮರಿಗಳನ್ನು ಬ್ರೀಡಿಂಗ್ ಮಾಡಲಾಗಿದೆ ಎಂದು ಪಿಲಿಕುಲ ನಿಸರ್ಗಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
