
ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಕೃತಕ ಬಣ್ಣ ಬಳಸುವುದರಿಂದ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವುದರಿಂದ ಕಲರ್ ಕಾಟನ್ ಕ್ಯಾಂಡಿಯನ್ನು ನಿಷೇಧಿಸಲಾಗಿದೆ. ಜೊತೆಗೆ ಗೋಬಿ ಮಂಚೂರಿ ತಯಾರಿಸುವಾಗ ಕೃತಕ ಬಣ್ಣ ಬಳಸುವುದನ್ನು ಕೂಡ ನಿಷೇಧಿಸಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಕಲರ್ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯನ್ ಮಾದರಿಗಳಲ್ಲಿ ಆರೋಗ್ಯಕ್ಕೆ ಮಾರಕವಾದ ಅಂಶ ಹಾಗೂ ಬಳಕೆಯ ಬಣ್ಣ ಸೇರಿದಂತೆ ವ್ಯಸನಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಗೋಬಿ ಮಂಚೂರಿಯನ್ ಸ್ಯಾಂಪಲ್ ಸಂಗ್ರಹಿಸಿದ್ದು, ಅದರಲ್ಲಿ ಟಾರ್ಟ್ರಾಸೈನ್, ಸನ್ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಎಂಬ ರಾಸಾಯನಿಕಗಳು ಕಂಡುಬಂದಿವೆ. ಕಾಟನ್ ಕ್ಯಾಂಡಿ ಮಾದರಿಗಳಲ್ಲಿ ಕೂಡಾ ಟಾರ್ಟ್ರಾಸೈನ್ ಸನ್ಸೆಟ್ ಯೆಲ್ಲೋ ಮತ್ತು ವಿಶೇಷವಾಗಿ ರೋಡಮೈನ್ ಬಿ ಬಳಸಲಾಗಿದೆ. ಈ ಅಸುರಕ್ಷಿತ ವಸ್ತುಗಳನ್ನು ಬಳಕೆ ಮಾಡದಂತೆ ಸೂಚಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುವುದು ಎಂದರು.

