
ಶಬರಿಮಲೆ ನವೆಂಬರ್ 23: ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಬಂದ 6 ವರ್ಷ ಬಾಲಕಿಗೆ ಹಾವು ಕಚ್ಚಿದ ಘಟನೆ ವರದಿಯಾಗಿದ್ದು, ಸದ್ಯ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ಆರು ವರ್ಷದ ಬಾಲಕಿ ನಿರಂಜನ ತನ್ನ ಕುಟುಂಬ ಸದಸ್ಯರೊಂದಿಗೆ ಅಯ್ಯಪ್ಪ ದೇವರ ದರ್ಶನಕ್ಕೆ ಶಬರಿಮಲೆಗೆ ತೆರಳಿದ್ದಳು. ಬೆಳಗಿನ ಜಾವ 4 ಗಂಟೆಗೆ ಅಯ್ಯಪ್ಪನ ರಸ್ತೆಯ ಮುಂಭಾಗದಲ್ಲಿ ವೈಪರ್ ಹಾವೊಂದು ಬಾಲಕಿಗೆ ಕಚ್ಚಿದೆ. ತಕ್ಷಣ ಸ್ಪಂದಿಸಿದ ದೇವಸ್ಥಾನದ ಅಧಿಕಾರಿಗಳು ಬಾಲಕಿಯನ್ನು ಪಂಬಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಮಗುವಿಗೆ ತುರ್ತು ಚಿಕಿತ್ಸೆ ನೀಡಲಾಯಿತು. ನಂತರ ಉತ್ತಮ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ನಂತರ, ದೇವಾಲಯದ ಆವರಣದಲ್ಲಿ ಹೆಚ್ಚಿನ ಹಾವು ಹಿಡಿಯುವವರನ್ನು ನಿಯೋಜಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ವನ್ಯಜೀವಿ ದಾಳಿ ತಡೆಯಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಪ್ರಸ್ತುತ ಇಲಾಖೆಯಲ್ಲಿ ಇಬ್ಬರು ಹಾವು ಹಿಡಿಯುವವರನ್ನು ನೇಮಿಸಲಾಗಿದೆ. ಆದರೆ, ಘಟನೆಯ ತೀವ್ರತೆಯನ್ನು ಪರಿಗಣಿಸಿ ಹೆಚ್ಚುವರಿಯಾಗಿ ಇಬ್ಬರು ಹಾವು ಹಿಡಿಯುವವರನ್ನು ನಿಯೋಜಿಸುವಂತೆ ಅರಣ್ಯ ರೇಂಜ್ ಆಫೀಸರ್ ಆದೇಶಿಸಿದ್ದಾರೆ

