ವಿಶ್ವಕಪ್ ಫೈನಲ್ | ರಾಜ್ಯದ ಎಲ್ಲ ಜಿಲ್ಲಾ ಕ್ರೀಡಾಂಗಣಗಳಲ್ಲಿ ಎಲ್‌ಇಡಿ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ ಕಲ್ಪಿಸಿದ ರಾಜ್ಯ ಸರ್ಕಾರ

ವಿಶ್ವಕಪ್ ಫೈನಲ್ | ರಾಜ್ಯದ ಎಲ್ಲ ಜಿಲ್ಲಾ ಕ್ರೀಡಾಂಗಣಗಳಲ್ಲಿ ಎಲ್‌ಇಡಿ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ ಕಲ್ಪಿಸಿದ ರಾಜ್ಯ ಸರ್ಕಾರ

ಬಹುನಿರೀಕ್ಷಿತ ಏಕದಿನ ವಿಶ್ವಕಪ್​ನ ಇಂದಿನ ಫೈನಲ್ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಪಂದ್ಯ ನಡೆಯಲಿದೆ.
ದೇಶಾದ್ಯಂತ ಹಬ್ಬದ ವಾತಾವರಣ ಶನಿವಾರದಿಂದಲೇ ಶುರುವಾಗಿದೆ. ಈ ನಡುವೆ ರಾಜ್ಯದ ಕಾಂಗ್ರೆಸ್ ಸರ್ಕಾರವು, ಎಲ್ಲ ಜಿಲ್ಲಾ ಕ್ರೀಡಾಂಗಣಗಳಲ್ಲಿ ಎಲ್‌ಇಡಿ ಪರದೆಯಲ್ಲಿ ಕ್ರಿಕೆಟ್ ಪ್ರಿಯರಿಗಾಗಿ ನೇರಪ್ರಸಾರದ ವ್ಯವಸ್ಥೆ ಕಲ್ಪಿಸಿರುವುದಾಗಿ ಆದೇಶ ಹೊರಡಿಸಿದೆ.

ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, “ನಾಡಿನ ಸಮಸ್ತ ಕ್ರಿಕೆಟ್ ಪ್ರಿಯರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ನಾಳಿನ ವಿಶ್ವಕಪ್ ಪಂದ್ಯಾಕೂಟದ ಫೈನಲ್ ಪಂದ್ಯವನ್ನು ರಾಜ್ಯದ ಎಲ್ಲ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ರಿಕೆಟ್ ಅಭಿಮಾನಿಗಳು‌ ಈ ಅವಕಾಶವನ್ನು ಬಳಸಿಕೊಂಡು ಫೈನಲ್ ಪಂದ್ಯದ ರೋಚಕ ಕ್ಷಣಗಳನ್ನು ಕಣ್ತುಂಬಿಕೊಳ್ಳಬೇಕೆಂದು ವಿನಂತಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘2023ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ನಮ್ಮ ದೇಶದಲ್ಲಿ ಆಯೋಜಿಸುತ್ತಿದ್ದು, ಇದರಲ್ಲಿ ನಮ್ಮ ಭಾರತ ತಂಡವು ವಿಶ್ವಕಪ್ ಪಂದ್ಯಾವಳಿಯ ಫೈನಲ್‌ಗೆ ತಲುಪಿರುವುದು ಸಂತೋಷದ ವಿಷಯ. ಈ ಸಂಬಂಧ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದೊಡ್ಡ ಸ್ಕ್ರೀನ್‌ಗಳನ್ನು ಅಳವಡಿಸಿ, ಫೈನಲ್ ಪಂದ್ಯಾವಳಿಯನ್ನು ಕ್ರೀಡಾಪಟುಗಳಿಗೆ ಮತ್ತು ಸಾರ್ವಜನಿಕರಿಗೆ MC&A ಇವರ ಸಹಯೋಗದೊಂದಿಗೆ ನೇರ ಪ್ರಸಾರ ಮಾಡುವಂತೆ ಆದೇಶದಲ್ಲಿ ಸೂಚಿಸಿದ್ದಾರೆ. ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಮಧ್ಯಾಹ್ನ 1.30ರಿಂದ ಮುಕ್ತಾಯವಾಗುವವರೆಗೆ ದೊಡ್ಡ ಎಲ್.ಇ.ಡಿ ಸ್ಕ್ರೀನ್‌ಗಳನ್ನು ಅಳವಡಿಸಿ, ನೇರ ಪ್ರಸಾರ ಮಾಡಲಾಗುವುದು’ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಜೊತೆಗೆ ಈ ಸಂದರ್ಭದಲ್ಲಿ ಸೂಕ್ತವಾದ ಭದ್ರತೆಯನ್ನು ಕೂಡ ಕಲ್ಪಿಸಲು ಸೂಚಿಸಿದೆ.

‘ಟೀಮ್ ಇಂಡಿಯಾ ಗೆಲ್ಲಲಿ’ ಎಂದು ಶುಭ ಹಾರೈಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ

ರಾಜ್ಯ