
ಹನ್ನೊಂದು ವರ್ಷಗಳ ಹಿಂದೆ ಹಂತಕರ ಕುಕೃತ್ಯಕ್ಕೆ ಬಲಿಯಾದ ಧರ್ಮಸ್ಥಳದ 17 ವರ್ಷದ ಬಾಲಕಿ ಸೌಜನ್ಯ ಪ್ರಕರಣವನ್ನು ಆಧರಿಸಿ ಸಿನಿಮಾ ಮಾಡಲು ಜೆ.ಕೆ ವೆಂಚರ್ಸ್ ಮುಂದಾಗಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ ಮಾಡಲಾಗಿದೆ ಎಂದು ವರದಿಯಾಗಿದೆ.
2012ರ ಅಕ್ಟೋಬರ್ 9ರಂದು ಸೌಜನ್ಯಳನ್ನು ದುರುಳರು ಅಪಹರಿಸಿ, ಅತ್ಯಾಚಾರಗೈದು, ಕೊಲೆ ಮಾಡಿದ್ದರು. ಪ್ರಕರಣದಲ್ಲಿ ಅಮಾಯಕನೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಕಳೆದ ತಿಂಗಳು (ಜೂನ್) 16ರಂದು ಆತ ನಿರಪರಾಧಿಯೆಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ.



ಈ ಬೆನ್ನಲ್ಲೇ, ಸೌಜನ್ಯ ನ್ಯಾಯಕ್ಕಾಗಿ ಹೋರಾಟ ಭುಗಿಲೆದ್ದಿದೆ. ನೈಜ ಅಪರಾಧಿಗಳನ್ನು ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕೆಂದು ರಾಜ್ಯಾದ್ಯಂತ ಒತ್ತಾಯಗಳು ಕೇಳಿಬಂದಿವೆ. ಸೌಜನ್ಯ ಕುಟುಂಬವು ಧರ್ಮಸ್ಥಳ ದೇವಸ್ಥಾನ ಮಂಡಳಿಯೊಂದಿಗೆ ಸಂಬಂಧ ಹೊಂದಿರುವ ಮೂವರು ಜೈನ್‌ಗಳೇ ಈ ಕೃತ್ಯ ಎಸಗಿದ್ದಾರೆಂದು ಶಂಕೆ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಸೌಜನ್ಯ ಪರ ಹೋರಾಟ ಭುಗಿಲೆದ್ದಿರುವ ಸಮಯದಲ್ಲಿಯೇ, ಪ್ರಕರಣವನ್ನಾಧರಿಸಿ ಸಿನಿಮಾ ಮಾಡಲು ಜಿಕೆ ವೆಂಚರ್ಸ್ ಮುಂದಾಗಿದ್ದು, ಟೈಟಲ್ ನೋಂದಣಿ ಮಾಡಿಸಿದೆ. ವಿ ಲವ ಅವರು ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ