ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆದ 2026ರ ಐಸಿಸಿ ಟಿ20 ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡವು ಅಮೆರಿಕ (USA) ವಿರುದ್ಧ 29 ರನ್‌ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಆರಂಭದಲ್ಲೇ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರಂತಹ ಪ್ರಮುಖ ಬ್ಯಾಟರ್‌ಗಳ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 77 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ನಾಯಕ ಸೂರ್ಯಕುಮಾರ್ ಯಾದವ್ ಆಸರೆಯಾದರು.
ಸೂರ್ಯಕುಮಾರ್ ಅವರ ಅಜೇಯ 84 ರನ್‌ಗಳ (49 ಎಸೆತ) ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಿತು. ಅಮೆರಿಕದ ಪರವಾಗಿ ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್ 4 ವಿಕೆಟ್ ಪಡೆದು ಭಾರತೀಯ ಬ್ಯಾಟರ್‌ಗಳಿಗೆ ಆರಂಭಿಕ ಆಘಾತ ನೀಡಿದರು.162 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅಮೆರಿಕ ತಂಡವು ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿತು.
ಅಮೆರಿಕ ಪರ ಸಂಜಯ್ ಕೃಷ್ಣಮೂರ್ತಿ 37 ರನ್ ಗಳಿಸಿ ಸ್ವಲ್ಪ ಮಟ್ಟಿನ ಹೋರಾಟ ನಡೆಸಿದರೂ, ಉಳಿದ ಆಟಗಾರರಿಂದ ನಿರೀಕ್ಷಿತ ಸಾಥ್ ಸಿಗಲಿಲ್ಲ. ಅಂತಿಮವಾಗಿ ಅಮೆರಿಕ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ನಿರ್ಣಾಯಕ ಹಂತದಲ್ಲಿ ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅನಾರೋಗ್ಯದ ಕಾರಣದಿಂದಾಗಿ ಜಸ್ಪ್ರೀತ್ ಬುಮ್ರಾ ಈ ಪಂದ್ಯದಿಂದ ಹೊರಗುಳಿದಿದ್ದರು. ಈ ಗೆಲುವಿನೊಂದಿಗೆ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನವನ್ನು ಆತ್ಮವಿಶ್ವಾಸದೊಂದಿಗೆ ಆರಂಭಿಸಿದೆ.

