ಅಭಿಷೇಕ್ ಶರ್ಮಾ, ಸೂರ್ಯ ಅಬ್ಬರ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸರಣಿ ವಶ!

ಅಭಿಷೇಕ್ ಶರ್ಮಾ, ಸೂರ್ಯ ಅಬ್ಬರ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸರಣಿ ವಶ!

ಗುವಾಹಟಿ: ಇಲ್ಲಿನ ಬರ್ಸಪಾರ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 3-0 ಅಂತರದ ಅಜೇಯ ಮುನ್ನಡೆ ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ದುಕೊಂಡಿತು. ನ್ಯೂಜಿಲೆಂಡ್ ತಂಡ ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ನ್ಯೂಜಿಲೆಂಡ್ ಪರ ಗ್ಲೆನ್ ಫಿಲಿಪ್ಸ್ (48 ರನ್) ಗರಿಷ್ಠ ಸ್ಕೋರ್ ಮಾಡಿದರೆ, ಭಾರತದ ಪರ ಜಸ್ಪ್ರೀತ್ ಬುಮ್ರಾ 17 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.

​154 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಸಂಜು ಸ್ಯಾಮ್ಸನ್ ಮೊದಲ ಎಸೆತದಲ್ಲೇ ಔಟಾಗಿ ಆಘಾತ ನೀಡಿದರೂ, ನಂತರ ಬಂದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಕಿವೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅದರಲ್ಲೂ ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು (ಇದು ಭಾರತದ ಪರ 2ನೇ ವೇಗದ ಟಿ20 ಫಿಫ್ಟಿ). ಅಭಿಷೇಕ್ 20 ಎಸೆತಗಳಲ್ಲಿ ಅಜೇಯ 68 ರನ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ ಅಜೇಯ 57 ರನ್ ಚಚ್ಚುವ ಮೂಲಕ ತಂಡವನ್ನು ಕೇವಲ 10 ಓವರ್‌ಗಳಲ್ಲಿ ಗುರಿ ತಲುಪಿಸಿದರು. ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ತಂಡ ಇನ್ನೂ 60 ಎಸೆತಗಳು ಬಾಕಿ ಇರುವಂತೆಯೇ ಐತಿಹಾಸಿಕ ಜಯ ದಾಖಲಿಸಿತು. ಜಸ್ಪ್ರೀತ್ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಅಂತರಾಷ್ಟ್ರೀಯ ಕ್ರೀಡೆ