ಧನು ಪೂಜೆಗೆಂದು ಹೋದ ಒಂಬತ್ತನೇ ತರಗತಿ ವಿದ್ಯಾರ್ಥಿ ಕೆರೆಯಲ್ಲಿ ಶವವಾಗಿ ಪತ್ತೆ

ಧನು ಪೂಜೆಗೆಂದು ಹೋದ ಒಂಬತ್ತನೇ ತರಗತಿ ವಿದ್ಯಾರ್ಥಿ ಕೆರೆಯಲ್ಲಿ ಶವವಾಗಿ ಪತ್ತೆ

ಬೆಳ್ತಂಗಡಿ: ಧನು ಪೂಜೆಗೆಂದು ಮುಂಜಾನೆ ಮನೆಯಿಂದ ಹೊರಟಿದ್ದ 15 ವರ್ಷದ ಬಾಲಕನೋರ್ವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಘಟನೆಯ ವಿವರ:​ ಮೃತರನ್ನು ಸಂಬೋಲ್ಯ ಬಾರಮೇಲು ನಿವಾಸಿ ಸುಬ್ರಹ್ಮಣ್ಯ ನಾಯ್ಕ್ ಅವರ ಪುತ್ರ ಸುಮಂತ್ (15) ಎಂದು ಗುರುತಿಸಲಾಗಿದೆ. ಈತ ಗೇರುಕಟ್ಟೆ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದನು. ಬುಧವಾರ ಮುಂಜಾನೆ ಸುಮಾರು 4 ಗಂಟೆಗೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಸ್ಥಳೀಯ ದೇವಸ್ಥಾನದಲ್ಲಿ ನಡೆಯುವ ಧನುರ್ ಪೂಜೆಯಲ್ಲಿ ಪಾಲ್ಗೊಳ್ಳಲು ಸುಮಂತ್ ಮನೆಯಿಂದ ಹೊರಟಿದ್ದನು ಎಂದು ತಿಳಿದುಬಂದಿದೆ.

ಆದರೆ, ದೇವಸ್ಥಾನಕ್ಕೆ ತೆರಳಿದ ಬಾಲಕ ಮನೆಗೆ ಮರಳದಿದ್ದಾಗ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಕೆರೆಯೊಂದರಲ್ಲಿ ಸುಮಂತ್ ಶವವಾಗಿ ಪತ್ತೆಯಾಗಿದ್ದಾನೆ.

ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಅರುಣ್ ಕೆ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, “ಬಾಲಕ ಮುಂಜಾನೆ ಪೂಜೆಗೆಂದು ಹೋದಾಗ ಈ ಅವಘಡ ಸಂಭವಿಸಿದೆ. ಕೆರೆಗೆ ಬಿದ್ದಿದ್ದರಿಂದ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಅಪಘಾತ ಪ್ರಾದೇಶಿಕ ರಾಜ್ಯ