ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ‘ಧುರಂಧರ್’ ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬಿಡುಗಡೆಯಾಗಿ ನಾಲ್ಕು ವಾರಗಳು ಕಳೆದರೂ ಚಿತ್ರದ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ. ಈಗ ಈ ಸಿನಿಮಾ 4ನೇ ವಾರದಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ನಾಲ್ಕನೇ ವಾರದಲ್ಲಿ 100 ಕೋಟಿ ಮೈಲಿಗಲ್ಲು: ಸಾಮಾನ್ಯವಾಗಿ ಸಿನಿಮಾಗಳು ಮೊದಲ ಎರಡು ವಾರಗಳ ನಂತರ ಗಳಿಕೆಯಲ್ಲಿ ಕುಸಿತ ಕಾಣುತ್ತವೆ. ಆದರೆ ‘ಧುರಂಧರ್’ ವಿಷಯದಲ್ಲಿ ಇದು ಉಲ್ಟಾ ಆಗಿದೆ. ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ ಅವರ ಪ್ರಕಾರ, ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಬಿಡುಗಡೆಯಾದ ನಾಲ್ಕನೇ ವಾರದಲ್ಲಿ 100 ಕೋಟಿ ರೂಪಾಯಿ (ರೂ. 115.70 ಕೋಟಿ) ಗಳಿಸಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.
ಈ ಮೂಲಕ ಈ ಹಿಂದೆ ದಾಖಲೆ ಬರೆದಿದ್ದ ‘ಪುಷ್ಪ 2’ (ಹಿಂದಿ), ‘ಛಾವಾ’ ಮತ್ತು ‘ಸ್ತ್ರೀ 2’ ಸಿನಿಮಾಗಳ ನಾಲ್ಕನೇ ವಾರದ ಗಳಿಕೆಯನ್ನು ಧುರಂಧರ್ ಹಿಂದಿಕ್ಕಿದೆ.
ಸತತ 28 ದಿನಗಳ ಕಾಲ ಡಬಲ್ ಡಿಜಿಟ್ ಕಲೆಕ್ಷನ್:ಧುರಂಧರ್ ಸಿನಿಮಾ ಮತ್ತೊಂದು ಅಪರೂಪದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಬಿಡುಗಡೆಯಾದ ಮೊದಲ ದಿನದಿಂದ ಸತತ 28 ದಿನಗಳ ಕಾಲ ಪ್ರತಿದಿನ 10 ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸ್‌ನಿಂದ ಬಾಚಿಕೊಂಡಿದೆ. ಈವರೆಗಿನ ಒಟ್ಟು ಗಳಿಕೆ ಭಾರತದಲ್ಲಿ ಸುಮಾರು 784.50 ಕೋಟಿ ರೂಪಾಯಿ ದಾಟಿದೆ ಎಂದು ವರದಿಯಾಗಿದೆ.
ಅಮಿತ್ ಲೋಧಾ ಅವರ ಕಾರ್ಯಾಚರಣೆಯ ಆಧಾರಿತ ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರದ ಎರಡನೇ ಭಾಗವು ಮಾರ್ಚ್ 2026 ರಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.
ಹೊಸ ಸಿನಿಮಾಗಳ ಪೈಪೋಟಿ ಮತ್ತು ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗಿದ್ದರೂ, ‘ಧುರಂಧರ್’ ತನ್ನ ಓಟವನ್ನು ಮುಂದುವರಿಸುತ್ತಿರುವುದು ಬಾಲಿವುಡ್ ಮಂದಿಗೆ ಅಚ್ಚರಿ ಮೂಡಿಸಿದೆ.

