ಹೊಸ ದೆಹಲಿ: ಕ್ರಿಕೆಟ್ ಅಂಗಳದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಶ್ವದ ಗಮನ ಸೆಳೆದಿರುವ 14 ವರ್ಷದ ಬ್ಯಾಟಿಂಗ್ ಸಂಚಲನ ವೈಭವ್ ಸೂರ್ಯವಂಶಿ ಅವರಿಗೆ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಷ್ಠಿತ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ನೀಡಿ ಗೌರವಿಸಿದರು.

ದೆಹಲಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ವೈಭವ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಹಲವು ಮಕ್ಕಳಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕ್ರೀಡಾ ವಿಭಾಗದಲ್ಲಿ ವೈಭವ್ ಸೂರ್ಯವಂಶಿ ಅವರೊಂದಿಗೆ ಈಜು ಪಟು ಧಿನಿಧಿ ದೇಸಿಂಗು ಮತ್ತು ಏಳು ವರ್ಷದ ಚದುರಂಗ ಪ್ರತಿಭೆ ವಾಕಾ ಲಕ್ಷ್ಮಿ ಪ್ರಜ್ಞಿಕಾ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ದಾಖಲೆಗಳ ಸರದಾರ ವೈಭವ್: ಬಿಹಾರ ಮೂಲದ ಈ ಎಡಗೈ ಬ್ಯಾಟರ್ ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದ ವಿರುದ್ಧ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕೇವಲ 84 ಎಸೆತಗಳಲ್ಲಿ 190 ರನ್ ಚಚ್ಚಿ ಇಡೀ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿದ್ದರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ ಹಾಗೂ 15 ಸಿಕ್ಸರ್‌ಗಳು ಸೇರಿದ್ದವು.
ಏನಿದು ರಾಷ್ಟ್ರೀಯ ಬಾಲ ಪುರಸ್ಕಾರ? ಕಲೆ, ಸಂಸ್ಕೃತಿ, ಧೈರ್ಯ, ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡುವ 5 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೇಂದ್ರ ಸರ್ಕಾರವು ಈ ಪ್ರಶಸ್ತಿಯನ್ನು ನೀಡುತ್ತದೆ. ಪ್ರಶಸ್ತಿಯು ಪದಕ, ಪ್ರಮಾಣಪತ್ರ ಮತ್ತು ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

