ಮೈಸೂರು ಅರಮನೆ ಬಳಿ ಗ್ಯಾಸ್ ಸಿಲಿಂಡರ್ ಸ್ಫೋಟ: ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಬಳಿ ಗ್ಯಾಸ್ ಸಿಲಿಂಡರ್ ಸ್ಫೋಟ: ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ

ಮೈಸೂರು: ಕ್ರಿಸ್‌ಮಸ್ ರಜೆಯ ಸಂಭ್ರಮದಲ್ಲಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ರಾತ್ರಿ ಭೀಕರ ದುರಂತವೊಂದು ಸಂಭವಿಸಿದೆ. ಮೈಸೂರು ಅರಮನೆಯ ಜಯಮಾರ್ತಾಂಡ ಗೇಟ್ ಬಳಿ ಬಲೂನ್ ಅನಿಲ ತುಂಬುವ ಸಿಲಿಂಡರ್ ಸ್ಫೋಟಗೊಂಡು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ವಿವರ:​ ಗುರುವಾರ ರಾತ್ರಿ ಸುಮಾರು 8:30ರ ವೇಳೆಗೆ ಅರಮನೆಯ ಜಯಮಾರ್ತಾಂಡ ಗೇಟ್ ಬಳಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಸೈಕಲ್ ಮೇಲೆ ಸಣ್ಣ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಹೀಲಿಯಂ ಬಲೂನ್‌ಗಳನ್ನು ಮಾರಾಟ ಮಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬಲೂನ್ ವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕ್ರಿಸ್‌ಮಸ್ ರಜೆ ಮತ್ತು ವಸ್ತುಪ್ರದರ್ಶನದ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಸಾವಿರಾರು ಪ್ರವಾಸಿಗರು ಜಮಾಯಿಸಿದ್ದರು. ಏಕಾಏಕಿ ಸಂಭವಿಸಿದ ಭಾರಿ ಸದ್ದಿನ ಸ್ಫೋಟದಿಂದಾಗಿ ಪ್ರವಾಸಿಗರು ಗಾಬರಿಗೊಂಡು ಓಡಲಾರಂಭಿಸಿದರು, ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ನೀಡಿದ ಮಾಹಿತಿಯ ಪ್ರಕಾರ, ಘಟನೆಯಲ್ಲಿ ನಾಲ್ವರು ಪಾದಚಾರಿಗಳು ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೃತ ವ್ಯಾಪಾರಿ ಸ್ಥಳೀಯ ನಿವಾಸಿ (ಸುಮಾರು 40 ವರ್ಷ) ಎಂದು ಗುರುತಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಅಪಘಾತ ರಾಜ್ಯ