ಚಿತ್ರದುರ್ಗ ಭೀಕರ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಸಿಎಂ ಸಾಂತ್ವನ; ಸಮಗ್ರ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ

ಚಿತ್ರದುರ್ಗ ಭೀಕರ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಸಿಎಂ ಸಾಂತ್ವನ; ಸಮಗ್ರ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಘಟನೆಯ ಹಿನ್ನೆಲೆ​: ಗುರುವಾರ ಮುಂಜಾನೆ ಸುಮಾರು 2 ಗಂಟೆಯ ಸುಮಾರಿಗೆ ಹಿರಿಯೂರು ಸಮೀಪ ವೇಗವಾಗಿ ಬಂದ ಕಂಟೈನರ್ ಟ್ರಕ್, ಖಾಸಗಿ ಲಕ್ಸುರಿ ಸ್ಲೀಪರ್ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ ಒಂಬತ್ತು ಮಂದಿ ಸಜೀವ ದಹನವಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ: ಅಪಘಾತದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ಈ ದುರ್ಘಟನೆ ಅತ್ಯಂತ ದುರದೃಷ್ಟಕರ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳನ್ನು ಸೂಚಿಸುತ್ತೇನೆ. ಘಟನೆಗೆ ನಿಖರ ಕಾರಣವೇನು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ಆದೇಶಿಸಿದ್ದೇನೆ,” ಎಂದು ತಿಳಿಸಿದರು.

“ಅತಿವೇಗ ಅಥವಾ ಚಾಲಕನ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆಯಾಗಲಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ಸಿಎಂ ಭರವಸೆ ನೀಡಿದರು.

ಸದ್ಯ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

https://www.facebook.com/share/r/1APPz4M2EH

ಅಪಘಾತ ರಾಜ್ಯ