ದೀರ್ಘಕಾಲದ ಕಾಯುವಿಕೆಯ ನಂತರ ಕಾಶ್ಮೀರ ಕಣಿವೆಯಲ್ಲಿ ಸಂಭವಿಸಿದ ಹಿಮಪಾತವು ಪ್ರವಾಸಿಗರು ಮತ್ತು ಪ್ರವಾಸೋದ್ಯಮದ ಮೇಲೆ ನಂಬಿಕೆ ಇಟ್ಟಿರುವ ಸ್ಥಳೀಯರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ವರ್ಷ ಸರಣಿ ಸಂಕಷ್ಟಗಳನ್ನು ಎದುರಿಸಿದ್ದ ಕಾಶ್ಮೀರದ ಪ್ರವಾಸೋದ್ಯಮ ಕ್ಷೇತ್ರವು ಈಗ ಮತ್ತೆ ಚೇತರಿಕೆಯ ಹಾದಿಯಲ್ಲಿದೆ.

ಈ ವರ್ಷ ಕಾಶ್ಮೀರದ ಪ್ರವಾಸೋದ್ಯಮವು ಹಲವು ಸವಾಲುಗಳನ್ನು ಎದುರಿಸಿತ್ತು. ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಘಟನೆಯಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದರು, ಇದು ಪ್ರವಾಸಿಗರಲ್ಲಿ ಆತಂಕ ಮೂಡಿಸಿ ಭೇಟಿಯ ಪ್ರಮಾಣವನ್ನು ಕುಗ್ಗಿಸಿತ್ತು.
ಭಯೋತ್ಪಾದನಾ ದಾಳಿಯ ನಂತರ ಚೇತರಿಸಿಕೊಳ್ಳುತ್ತಿದ್ದ ಹೊತ್ತಲ್ಲೇ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಅತಿಯಾದ ಮಳೆಯು ಪ್ರವಾಹದ ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯು ದಿನಗಟ್ಟಲೆ ಬಂದ್ ಆದ ಕಾರಣ ಪ್ರವಾಸಿಗರು ಕಾಶ್ಮೀರಕ್ಕೆ ಬರಲು ಹಿಂದೇಟು ಹಾಕಿದ್ದರು.
ಇದೀಗ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಗುಲ್ಮಾರ್ಗ ಸೇರಿದಂತೆ ಕಣಿವೆಯಾದ್ಯಂತ ಸುರಿಯುತ್ತಿರುವ ಹಿಮವು ಪ್ರವಾಸೋದ್ಯಮಕ್ಕೆ ಹೊಸ ಜೀವ ನೀಡಿದೆ.

