ಬೆಂಗಳೂರು (ಡಿ. 24): ರಾಜಧಾನಿ ಬೆಂಗಳೂರಿನಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಮತ್ತೊಂದು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಹೋಟೆಲ್ ಮ್ಯಾನೇಜರ್ ಒಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಹಾಯಕ ಪೊಲೀಸ್ ಆಯುಕ್ತರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಕೃಷ್ಣಮೂರ್ತಿ ಬಂಧಿತ ಅಧಿಕಾರಿಯಾಗಿದ್ದಾರೆ. ಹೋಟೆಲ್ ವಹಿವಾಟಿಗೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಬುಧವಾರ ಈ ಬಂಧನ ನಡೆದಿದೆ.
ಘಟನೆಯ ವಿವರ: ರಾಜಾಜಿನಗರದ ಹೋಟೆಲ್ ಒಂದರ ಮ್ಯಾನೇಜರ್ ಆಗಿರುವ ಸಂಜಯ್ ಕುಮಾರ್ ಅವರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಹೋಟೆಲ್ ಅನ್ನು ನಿಗದಿತ ಅವಧಿಗಿಂತ ಹೆಚ್ಚಿನ ಸಮಯ ತೆರೆಯಲು ಅವಕಾಶ ಮಾಡಿಕೊಡುವ ಸಲುವಾಗಿ ಎಸಿಪಿ ಕೃಷ್ಣಮೂರ್ತಿ ಅವರು 50,000 ರೂಪಾಯಿ ಲಂಚಕ್ಕೆ ಪೀಡಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ರೆಡ್ ಹ್ಯಾಂಡ್ ಆಗಿ ಸೆರೆ: ದೂರಿನ ಅನ್ವಯ ಕಾರ್ಯಾಚರಣೆ ಇಳಿದ ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದರು. ಇಂದು (ಬುಧವಾರ) ಎಸಿಪಿ ಕೃಷ್ಣಮೂರ್ತಿ ಅವರು ಸಂಜಯ್ ಕುಮಾರ್ ಅವರಿಂದ ಮುಕ್ತಾಡದ ಹಣವಾಗಿ 30,000 ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಣದ ಸಮೇತ ಅಧಿಕಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

