ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕರ್ನಾಟಕದ ಆಲ್‌ರೌಂಡರ್ ಕೆ. ಗೌತಮ್

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕರ್ನಾಟಕದ ಆಲ್‌ರೌಂಡರ್ ಕೆ. ಗೌತಮ್

ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಮತ್ತು ಟೀಮ್ ಇಂಡಿಯಾ ಪರ ಒಂದು ಏಕದಿನ ಪಂದ್ಯವಾಡಿದ್ದ ಕೃಷ್ಣಪ್ಪ ಗೌತಮ್ ಅವರು ಸೋಮವಾರ (ಡಿಸೆಂಬರ್ 22) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

ಕಳೆದ ದಶಕದಲ್ಲಿ ಕರ್ನಾಟಕ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೌತಮ್, ತಮ್ಮ ಸ್ಪಿನ್ ಬೌಲಿಂಗ್ ಹಾಗೂ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯ ವಿಜೇತ ಆಟಗಾರನಾಗಿ ಗುರುತಿಸಿಕೊಂಡಿದ್ದರು.

37 ವರ್ಷದ ಗೌತಮ್ ಕರ್ನಾಟಕ ತಂಡದ ಪರವಾಗಿ ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ದಾಖಲೆಗಳನ್ನು ಹೊಂದಿದ್ದಾರೆ. ಅವರ ವೃತ್ತಿಜೀವನದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ:​

  • ಪ್ರಥಮ ದರ್ಜೆ ಕ್ರಿಕೆಟ್: 59 ಪಂದ್ಯಗಳಿಂದ 224 ವಿಕೆಟ್‌ಗಳನ್ನು ಕಬಳಿಸಿದ್ದಾರೆ.​
  • ಲಿಸ್ಟ್ ಎ ಕ್ರಿಕೆಟ್: 68 ಪಂದ್ಯಗಳಲ್ಲಿ 96 ವಿಕೆಟ್‌ಗಳನ್ನು ಪಡೆದಿದ್ದಾರೆ.​
  • ಟಿ20 ಕ್ರಿಕೆಟ್: 92 ಪಂದ್ಯಗಳಲ್ಲಿ 74 ವಿಕೆಟ್‌ಗಳನ್ನು ಪಡೆದಿರುವುದಲ್ಲದೆ, 158.18 ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುವ ಮೂಲಕ ‘ರೇಂಜ್-ಹಿಟ್ಟರ್’ ಆಗಿ ಮಿಂಚಿದ್ದಾರೆ.

ಐಪಿಎಲ್ ಮತ್ತು ಅಂತರಾಷ್ಟ್ರೀಯ ಪಯಣ ಕೆ. ಗೌತಮ್ ಐಪಿಎಲ್ ಹರಾಜಿನಲ್ಲಿ ಭಾರಿ ಮೊತ್ತಕ್ಕೆ (9.25 ಕೋಟಿ ರೂ.) ಮಾರಾಟವಾಗುವ ಮೂಲಕ ಸುದ್ದಿಯಾಗಿದ್ದರು. ಅವರು ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. 2021ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅವರು ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದರು.

“ಕರ್ನಾಟಕ ತಂಡದ ಪರ ಆಡುವುದು ಯಾವಾಗಲೂ ಹೆಮ್ಮೆಯ ವಿಷಯ. ನನ್ನ ಈ ಸುದೀರ್ಘ ಪಯಣದಲ್ಲಿ ಬೆಂಬಲಿಸಿದ ಕೆಎಸ್ ಸಿಎ (KSCA),ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು,” ಎಂದು ಗೌತಮ್ ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಭಾವುಕರಾಗಿ ಹೇಳಿದ್ದಾರೆ.

ಕ್ರೀಡೆ ರಾಜ್ಯ ರಾಷ್ಟ್ರೀಯ