IND VS SA T20: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ – ಸರಣಿ ವಶಪಡಿಸಿಕೊಂಡ ಟೀಮ್ ಇಂಡಿಯಾ, ಹಾರ್ದಿಕ್ ಪಾಂಡ್ಯ ಹೊಸ ದಾಖಲೆ!

IND VS SA T20: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ – ಸರಣಿ ವಶಪಡಿಸಿಕೊಂಡ ಟೀಮ್ ಇಂಡಿಯಾ, ಹಾರ್ದಿಕ್ ಪಾಂಡ್ಯ ಹೊಸ ದಾಖಲೆ!

ಅಹಮದಾಬಾದ್: ಆತಿಥೇಯ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 30 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 2025ರ ವರ್ಷವನ್ನು ಭಾರತ ತಂಡ 3-1 ಅಂತರದ ಸರಣಿ ಜಯದೊಂದಿಗೆ ಸ್ಮರಣೀಯವಾಗಿ ಅಂತ್ಯಗೊಳಿಸಿದೆ.

ಪಾಂಡ್ಯ ಅಬ್ಬರ, ತಿಲಕ್ ಭರ್ಜರಿ ಬ್ಯಾಟಿಂಗ್. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಅಬ್ಬರಿಸಿದರು. ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭಾರತದ ಪರ ಎರಡನೇ ಅತಿ ವೇಗದ ಟಿ20 ಅರ್ಧಶತಕದ ದಾಖಲೆ ಬರೆದರು. ಮತ್ತೊಂದೆಡೆ ಜವಾಬ್ದಾರಿಯುತ ಆಟವಾಡಿದ ತಿಲಕ್ ವರ್ಮಾ 73 ರನ್ ಗಳಿಸಿದರು. ಇವರ ಸ್ಫೋಟಕ ಆಟದ ನೆರವಿನಿಂದ ಭಾರತ 5 ವಿಕೆಟ್ ನಷ್ಟಕ್ಕೆ 231 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ವರುಣ್ ಚಕ್ರವರ್ತಿ ಸ್ಪಿನ್ ಜಾಲ ಬೃಹತ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ (65) ಬಿರುಸಿನ ಆರಂಭ ನೀಡಿದರು. ಆದರೆ, ವರುಣ್ ಚಕ್ರವರ್ತಿ ಅವರ ಸ್ಪಿನ್ ಜಾಲಕ್ಕೆ ಸಿಲುಕಿದ ಪ್ರೋಟೀಸ್ ಪಡೆ ದಿಢೀರ್ ಕುಸಿತ ಕಂಡಿತು. ಚಕ್ರವರ್ತಿ 4 ವಿಕೆಟ್ ಪಡೆದು ಮಿಂಚಿದರೆ, ಜಸ್ಪ್ರೀತ್ ಬುಮ್ರಾ ಕೇವಲ 17 ರನ್ ನೀಡಿ 2 ವಿಕೆಟ್ ಕಿತ್ತು ರನ್ ವೇಗಕ್ಕೆ ಬ್ರೇಕ್ ಹಾಕಿದರು. ಅಂತಿಮವಾಗಿ ಸೌತ್ ಆಫ್ರಿಕಾ 201 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಸೂರ್ಯಕುಮಾರ್ ಯಾದವ್ ಫಾರ್ಮ್ ಆತಂಕ. ಸರಣಿ ಗೆದ್ದ ಸಂಭ್ರಮದ ನಡುವೆಯೂ ನಾಯಕ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಆತಂಕ ಮೂಡಿಸಿದೆ. ಈ ಸರಣಿಯ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 34 ರನ್ ಗಳಿಸಿದ್ದಾರೆ. “ಬ್ಯಾಟರ್ ಆಗಿ ನಾನು ಎಲ್ಲೋ ಕಳೆದುಹೋಗಿದ್ದೇನೆ. ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ನಾನು ಬಲಿಷ್ಠವಾಗಿ ಪುನರಾಗಮನ ಮಾಡಬೇಕಿದೆ. ಆದರೆ ತಂಡದ ನಾಯಕನಾಗಿ ಈ ಸರಣಿ ಜಯ ನನಗೆ ಹೆಮ್ಮೆ ತಂದಿದೆ,” ಎಂದು ಸೂರ್ಯಕುಮಾರ್ ಪಂದ್ಯದ ನಂತರ ತಿಳಿಸಿದರು.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ