ಪುತ್ತೂರಿನಲ್ಲಿ ಡಿ. 20ಕ್ಕೆ ‘ಕಲಾರ್ಣವ’ : ಆಹ್ವಾನ ಪತ್ರಿಕೆ ಬಿಡುಗಡೆ

ಪುತ್ತೂರಿನಲ್ಲಿ ಡಿ. 20ಕ್ಕೆ ‘ಕಲಾರ್ಣವ’ : ಆಹ್ವಾನ ಪತ್ರಿಕೆ ಬಿಡುಗಡೆ

ಪುತ್ತೂರು(ಡಿ. 7): ಕರ್ನಾಟಕದ ಸಂಸ್ಕೃತಿ ಮತ್ತು ಕಲಾ ವೈಭವವನ್ನು ಸಾರುವ ಉದ್ದೇಶದಿಂದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಸಹಯೋಗದಲ್ಲಿ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮ ‘ಕಲಾರ್ಣವ’ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನಿನ್ನೆ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಡಿಸೆಂಬರ್ 20, 2025 ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹೆಸರಾಂತ ಕಲಾವಿದರು ಭಾಗವಹಿಸಲಿದ್ದಾರೆ.

ಪ್ರಾದೇಶಿಕ ಗಡಿ ಭಾಗಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿ-ಬೆಳೆಸುವ ಮುಖ್ಯ ಗುರಿಯೊಂದಿಗೆ ಈ ಒಂದು ದಿನದ ಸಾಂಸ್ಕೃತಿಕ ಸಡಗರವನ್ನು ಆಯೋಜಿಸಲಾಗುತ್ತಿದೆ. ನೃತ್ಯ ಮತ್ತು ಕಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಭರತನಾಟ್ಯ, ವಯೋಲಿನ್ ಮತ್ತು ಜಾನಪದ ನೃತ್ಯ ಸೇರಿದಂತೆ ಹಲವು ವೈವಿಧ್ಯಮಯ ಪ್ರದರ್ಶನಗಳು ಪ್ರೇಕ್ಷಕರ ಕಣ್ಮನ ಸೆಳೆಯಲಿವೆ.

ಶನಿವಾರದಂದು ನಡೆದ ಸರಳ ಸಮಾರಂಭದಲ್ಲಿ, ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಪುತ್ತೂರು ನೃತ್ಯೋಪಾಸನಾ ಕಲಾ ಅಕಾಡೆಮಿಯ ನಿರ್ದೇಶಕರು ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವೆಂದು ಸಂಘಟಕರು ಮನವಿ ಮಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿ, ನಾಡಿನ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವಂತೆ ಕಲಾರಾಧಕರಿಗೆ ಮತ್ತು ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿದೆ.

ಪ್ರಾದೇಶಿಕ ಮನೋರಂಜನೆ