ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಭಾರೀ ಹಿನ್ನಡೆಯಾದಂತಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಸ್. ಮುದಗಲ್ ಮತ್ತು ವೆಂಕಟೇಶ್ ನಾಯ್ಕ್ ಟಿ ಅವರಿದ್ದ ವಿಭಾಗೀಯ ಪೀಠವು, ಅಪರಾಧಗಳ ಗಂಭೀರತೆ, ಅವರ ವಿರುದ್ಧ ಬಾಕಿ ಇರುವ ಇತರ ಪ್ರಕರಣಗಳು ಮತ್ತು ಸಾಕ್ಷಿಗಳಿಗೆ ಬೆದರಿಕೆ ಸಾಧ್ಯತೆಗಳನ್ನು ಗಮನಿಸಿ, ಜಾಮೀನು ನೀಡಲು ಇದು ಸೂಕ್ತ ಪ್ರಕರಣವಲ್ಲ ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಾಲಯವು, ವಿಚಾರಣೆಯ ಸಮಯದಲ್ಲಿಯೂ ರೇವಣ್ಣಗೆ ಜಾಮೀನು ಮಂಜೂರಾಗಿರಲಿಲ್ಲ ಮತ್ತು ಅವರ ಪ್ರಭಾವಿ ಹಿನ್ನೆಲೆಯ ಕಾರಣದಿಂದಲೇ ಸಂತ್ರಸ್ತೆಯು ದೂರು ನೀಡಲು ವಿಳಂಬ ಮಾಡಿದ್ದರು ಎಂಬುದನ್ನು ಗಮನಿಸಿತು. ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಅತ್ಯಾಚಾರ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಈ ಹಿಂದೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ರದ್ದುಪಡಿಸಲು ಅಥವಾ ಅಮಾನತುಗೊಳಿಸಲು ಕೋರಿ ಪ್ರಜ್ವಲ್ ರೇವಣ್ಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

