ಬೆಂಗಳೂರು: (ಡಿಸೆಂಬರ್ 4) ನಗರದ ನಲ್ಲೂರಹಳ್ಳಿ ಪ್ರದೇಶದಲ್ಲಿ ನೆರೆಹೊರೆಯವರ ಕಿರುಕುಳ ಮತ್ತು ಆರ್ಥಿಕ ಬೇಡಿಕೆಗಳಿಂದ ಮನನೊಂದಿದ್ದ ಯುವಕನೊಬ್ಬ ನಿರ್ಮಾಣ ಹಂತದ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ಗುರುವಾರ ವರದಿಯಾಗಿದೆ.
ಮೃತ ಯುವಕ ಮುರಳಿ (45) ಎಂದು ಗುರುತಿಸಲಾಗಿದೆ. ಈ ಸಂಬಂಧ ಮುರಳಿ ಅವರ ತಾಯಿ ಲಕ್ಷ್ಮೀ ಗೋವಿಂದರಾಜು ಅವರು ಬುಧವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

₹20 ಲಕ್ಷಕ್ಕೆ ಬೇಡಿಕೆ, ಆಸ್ತಿ ವಿವಾದದ ಕಿರುಕುಳ ಆರೋಪ
2018 ರಲ್ಲಿ ಖರೀದಿಸಿದ ನಿವೇಶನದಲ್ಲಿ ಮುರಳಿ ಮನೆ ಕಟ್ಟಿಸುತ್ತಿದ್ದರು. ಈ ವೇಳೆ ನೆರೆಮನೆಯವರಾದ ಉಷಾ ನಂಬಿಯಾರ್ ಮತ್ತು ಶಶಿ ನಂಬಿಯಾರ್ ಎಂಬ ದಂಪತಿಗಳು ಆಸ್ತಿ ವಿವಾದವನ್ನು ಸೃಷ್ಟಿಸಿ, ಮುರಳಿ ಬಳಿ ₹20 ಲಕ್ಷ ಹಣಕ್ಕೆ ನಿರಂತರವಾಗಿ ಬೇಡಿಕೆ ಇಡುತ್ತಿದ್ದರು ಎಂದು ಲಕ್ಷ್ಮೀ ಗೋವಿಂದರಾಜು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಬಿಬಿಎಂಪಿ ಸಿಬ್ಬಂದಿ ಜೊತೆ ಬಂದು ಮಾನಸಿಕ ಹಿಂಸೆ
ಮುರಳಿ ಅವರು ಹಣ ನೀಡಲು ನಿರಾಕರಿಸಿದಾಗ, ನಂಬಿಯಾರ್ ದಂಪತಿಗಳು ಕೆಲವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಬ್ಬಂದಿಯನ್ನು ಕರೆತಂದು, ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮುರಳಿಗೆ ಮಾನಸಿಕವಾಗಿ ಹಿಂಸೆ ನೀಡಿ ಬೆದರಿಕೆ ಹಾಕಿದ್ದರು. ಈ ಕಿರುಕುಳ ಮತ್ತು ನಿರಂತರ ಒತ್ತಡಕ್ಕೆ ಒಳಗಾದ ಮುರಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

