ಬೆಂಗಳೂರು: ನಾಗರಿಕರಿಗೆ ಭೂ ದಾಖಲೆಗಳ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯು ಮಹತ್ವದ ಬದಲಾವಣೆಗೆ ಸಿದ್ಧತೆ ನಡೆಸಿದೆ. ಇನ್ಮುಂದೆ, ಪಹಣಿ (ಆರ್‌ಟಿಸಿ), ಆಕಾರಬಂದ್, ಪೋಡಿ ನಕ್ಷೆ ಮತ್ತು ಮುಟೇಷನ್ ಸೇರಿ ನಾಲ್ಕು ಪ್ರಮುಖ ದಾಖಲೆಗಳು ಕೇವಲ 25 ರೂಪಾಯಿಗಳ ಶುಲ್ಕದಲ್ಲಿ ಒಂದೇ ಹಾಳೆಯಲ್ಲಿ ಲಭ್ಯವಾಗುವ ವ್ಯವಸ್ಥೆಯನ್ನು ಜಾರಿಗೊಳಿಸಲು ಇಲಾಖೆ ತೀರ್ಮಾನಿಸಿದೆ.

ಈ ಹೊಸ ವ್ಯವಸ್ಥೆಯಿಂದಾಗಿ ರೈತರು ಮತ್ತು ಸಾರ್ವಜನಿಕರು ದಾಖಲೆಗಳಿಗಾಗಿ ಪದೇ ಪದೇ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ಮತ್ತು ಅನಗತ್ಯ ಹಣ ಖರ್ಚು ಮಾಡುವುದು ಕಡಿಮೆಯಾಗಲಿದ್ದು, ಕೆಲವೇ ದಿನಗಳಲ್ಲಿ ಈ ಸುಧಾರಣೆ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.

