ಉಡುಪಿ: ಪುತ್ತಿಗೆ ಮಠದ ವಿಶ್ವಗೀತಾ ಪರ್ಯಾಯ (2024-2026) ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನವೆಂಬರ್ 21, 2025ರಂದು ನಡೆದ ಬೃಹತ್ ಗೀತೋತ್ಸವ ಕಾರ್ಯಕ್ರಮದಲ್ಲಿ ಸುಳ್ಯದ ವೇದಮೂರ್ತಿ ಪುರೋಹಿತ ನಾಗರಾಜ ಭಟ್ ಅವರಿಗೆ ಪ್ರತಿಷ್ಠಿತ ‘ಶ್ರೀಶ್ರೀಕೃಷ್ಣಾಗೀತಾನುಗ್ರಹ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಭಗವದ್ಗೀತೆ ಪ್ರಚಾರ ಮತ್ತು ವೇದಾಧ್ಯಯನ ಕ್ಷೇತ್ರದಲ್ಲಿ ಸುದೀರ್ಘ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ನಾಗರಾಜ ಭಟ್ ಅವರ ಸೇವೆಗಾಗಿ ಅವರಿಗೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ದಿವ್ಯ ಸನ್ನಿಧಿಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ, ಸಾಧಕ ವೇದಮೂರ್ತಿ ಪುರೋಹಿತ ನಾಗರಾಜ ಭಟ್ ಅವರನ್ನು ಅನುಗ್ರಹಿಸಿದರು. ಈ ಬೃಹತ್ ಗೀತೋತ್ಸವ ಕಾರ್ಯಕ್ರಮವು ವಿಶ್ವಮಟ್ಟದಲ್ಲಿ ಭಗವದ್ಗೀತೆಯ ಮಹತ್ವವನ್ನು ಸಾರುವ ಪುತ್ತಿಗೆ ಶ್ರೀಗಳ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿದೆ.

